ಫ್ಲೋರೈಡ್ ಯುಕ್ತ ನೀರು ಇರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿ, ಜನರಿಗೆ ಶುದ್ಧಕುಡಿಯುವ ನೀರು ಒದಗಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಸೋಮವಾರ ಭೂ ಸೇನಾ ನಿಗಮದಿಂದ ಸುಮಾರು ೭.೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದು ದೊಡ್ಡ ಸಮಸ್ಯೆಯಾಗಿದ್ದು, ಈಗಾಗಲೇ ತಾಲ್ಲೂಕಿನಲ್ಲಿ ಸುಮಾರು ೧೬೩ ಹಳ್ಳಿಗಳಲ್ಲಿನ ನೀರು ಜನರಿಗೆ ಕುಡಿಯಲು ಯೋಗ್ಯವಾಗಿಲ್ಲದ ಕಾರಣದಿಂದಾಗಿ ಪ್ರಾರಂಭಿಕ ಹಂತದಲ್ಲಿ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿತ್ತು, ಈಗ ಯಾವ ಹಳ್ಳಿಯಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲವೋ ಅಂತಹ ಗ್ರಾಮಕ್ಕೆ ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿಕೊಡಲಾಗುತ್ತದೆ. ಜನರೂ ಕೂಡಾ ಒಂದೊಂದು ಹನಿ ನೀರನ್ನು ಮಿತವಾಗಿ ಸದ್ಬಳಕೆ ಮಾಡಿಕೊಂಡು ನೀರು ಪೋಲಾಗುವುದನ್ನು ತಪ್ಪಿಸಬೇಕು. ಹಳ್ಳಿಗಳ ಅಭಿವೃದ್ಧಿಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಜಂಗಮಕೋಟೆಯಿಂದ ಶಿಡ್ಲಘಟ್ಟದ ವರೆಗೆ ಸಂಚಾರ ಮಾಡುವಂತಹ ಮುಖ್ಯ ರಸ್ತೆಯನ್ನು ಸುಮಾರು ೫.೫.ಮೀಟರ್ ನಷ್ಟು ಅಗಲ ಮಾಡಿ, ಡಾಂಬರೀಕರಣ ಮಾಡಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ನೀರಿನ ಮಿತಬಳಕೆಯ ಬಗ್ಗೆ ಪ್ರತಿಯೊಬ್ಬ ನಾಗರಿಕರೂ ಜಾಗೃತರಾಗಬೇಕು. ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳೊಂದಿಗೆ ಸಹಕಾರ ನೀಡಿ, ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯತಿ ಸದಸ್ಯರಾದ ರಾಜಶೇಖರ್, ಚಂದ್ರಕಲಾಬೈರೇಗೌಡ, ನಾಗಮಂಗಲ ಗ್ರಾಮಪಂಚಾಯತಿ ಅಧ್ಯಕ್ಷೆ ರೂಪಾಶಿವಕುಮಾರ್, ತಾದೂರುರಮೇಶ್, ಪಿ.ಡಿ.ಓ.ಗೋಪಾಲಕೃಷ್ಣ ಗೋಪಿನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.