ಗೌರಿ-ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಪ್ರತಿಬಾರಿಯಂತೆ ಪರಿಸರ ಸ್ನೇಹಿ ಬಣ್ಣರಹಿತ ಗಣೇಶ ವಿಗ್ರಹ ಪ್ರತಿಷ್ಠಾನೆ ಮಾತು ಅಲ್ಲಲ್ಲಿ ಕೇಳಿ ಬರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕರಪತ್ರ ವಿತರಿಸಿ ಕೈತೊಳೆದುಕೊಳ್ಳುತ್ತಿದೆ. ಇಷ್ಟಾಗಿಯೂ ಬಣ್ಣಕ್ಕೆ ಮಾರು ಹೋಗುವ ಬೆನ್ನಲ್ಲೇ ಪರಿಸರ ಕಾಳಜಿಯ ಮಾತು ಕೇಳಿಬರುತ್ತದೆ. `ಪರಿಸರಕ್ಕೆ ಬಣ್ಣ ಮಾರಕ’ ಎನ್ನುವ ವಿಚಾರ ಮಾತ್ರ ಗಣೇಶ ಚತುರ್ಥಿಯ ಆಸು-ಪಾಸಿನಲ್ಲೇ ಸುಳಿದು ಮರೆಯಾಗುತ್ತದೆ.
ಆದರೆ ಇದಕ್ಕೆ ಅಪವಾದದಂತೆ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಪರಿಸರ ಸ್ನೇಹಿ ಗಣಪ ಸಿದ್ಧಗೊಳ್ಳುತ್ತಿದ್ದಾನೆ. ವಿಶೇಷವೆಂದರೆ ತನ್ನ ಸ್ನೇಹಿತರ ಸಹಾಯ ಪಡೆದು ಕಿರಣ್ ಎಂಬ ಯುವಕ ಗ್ರಾಮದ ಗಣಪನನ್ನು ತಾನೇ ಸಿದ್ಧಪಡಿಸುತ್ತಿದ್ದಾನೆ. ತನ್ನ ಮಾವ ಶಿಲ್ಪಿ ನಾಗರಾಜ್ ಹಾಗೂ ಕೊಲ್ಕತ್ತದಲ್ಲಿ ತರಬೇತಿಯನ್ನು ಪಡೆದಿರುವ ಈತ ತನ್ನೂರಿನಲ್ಲಿ ತಾನೇ ತಯಾರಿಸಿರುವ ಗಣಪನ ಮೂರ್ತಿಯನ್ನಿಟ್ಟು ಹಬ್ಬ ಆಚರಿಸುವ ಆಸೆಯನ್ನಿಟ್ಟುಕೊಂಡು ತಯಾರಿಕೆಯಲ್ಲಿ ತೊಡಗಿದ್ದಾನೆ.
`ಸಂಪೂರ್ಣ ಕೈಯಿಂದ ತಯಾರಿಸಿರುವುದು ಹಾಗೂ ಕೇವಲ ಮಣ್ಣನ್ನು ಬಳಸಿರುವುದು ನಮ್ಮ ಗಣೇಶನ ವೈಶಿಷ್ಟ್ಯ. ನೆಲ್ಲುಲ್ಲಿ, ನೆಲ್ಲು ಹೊಟ್ಟು, ದಾರ, ಕಡ್ಡಿ, ಹುತ್ತದಮಣ್ಣನ್ನು ಬಳಸಿದ್ದೇನೆ. ಯಂತ್ರಗಳ ಮೂಲಕ ಮಣ್ಣನ್ನು ಬೇಯಿಸಿಲ್ಲ, ಬದಲಾಗಿ ಸ್ಪಷ್ಟರೂಪ ಕೊಟ್ಟು ಬಿಸಿಲಿನಲ್ಲಿಟ್ಟು ಒಣಗಿಸಿದ್ದೇನೆ. ಗಣಪನಿಗೆ ನಾವು ರಾಸಾಯನಿಕ ಬಣ್ಣಗಳನ್ನು ಬಳಸುವುದಿಲ್ಲ. ಮಣ್ಣಿನಿಂದ ತಯಾರಾದ ಗಣಪ ಬೇಗ ನೀರಿನಲ್ಲಿ ಕರಗುತ್ತಾನೆ. ಜನರು ತಾವು ಕೊಳ್ಳುವ ಉದ್ದ ಸೊಂಡಿಲ ಮುದ್ದು ಗಣಪ ಪರಿಸರಸ್ನೇಹಿಯಾಗಿರಲಿ, ಹಬ್ಬವನ್ನು ಅದ್ದೂರಿಯಿಂದ ಆಚರಿಸುವ ಮುನ್ನ ಅದರಿಂದ ನಿಸರ್ಗದ ಮೇಲಾಗುವ ಹಾನಿಗಳತ್ತ ಸ್ವಲ್ಪ ಚಿಂತಿಸುವಂತಾಗಲಿ. ಎಲ್ಲರೂ ಒಂದಾದರೆ ಅನೇಕ ಕೆರೆಗಳ ನೀರು ಕಲುಷಿತವಾಗುವುದನ್ನು ತಡೆಯಬಹುದು’ ಎನ್ನುತ್ತಾರೆ ಕಿರಣ್.
`ಪ್ರತಿಯೊಂದು ಒಂದಡಿ ಕೃತಕ ಬಣ್ಣಗಳ ಗಣಪನ ಮೇಲ್ಮೈ ಮೇಲೆ ೧೦ರಿಂದ ೨೦ ಗ್ರಾಂ ಸೀಸ ಇರುತ್ತದೆ. ಕೆರೆಯಲ್ಲಿ ಇಂಥ ಹತ್ತಿಪ್ಪತ್ತು ಸಾವಿರ ಗಣಪಗಳನ್ನು ಮುಳುಗಿಸಿದರೆ ನೀರಿಗೆ ಸೇರುವ ಸೀಸ ಪ್ರಮಾಣವನ್ನು ಯೋಚಿಸಬೇಕು. ನಿಧಾನವಿಷ ಸೀಸವು ಬಣ್ಣಗಳ ಮೂಲಕ ಜನರ ದೇಹವನ್ನು ಪ್ರವೇಶಿಸುತ್ತದೆ. ಇಂಥ ಬಣ್ಣಗಳ ಗಣಪನನ್ನು ಬಕೆಟಿನಲ್ಲಿ ಮುಳುಗಿಸಿದ ಮೇಲೆ ಬಕೆಟಿನ ನೀರನ್ನು ತುಳಸಿ ಗಿಡಕ್ಕೆ ಹಾಕಿದರೆ ಅದೂ ವಿಷವಾಗುತ್ತದೆ’ ಎಂದು ಅವರು ತಿಳಿಸಿದರು.
‘ಕುಡಿಯಲು ನೀರಿಲ್ಲದ ಇಂದಿನ ಬರದ ಪರಿಸ್ಥಿತಿಯಲ್ಲಂತೂ, ಇರುವ ಕೆರೆ, ಕಟ್ಟೆ, ಹೊಳೆ, ತೊರೆಗಳು ಸಂಪ್ರದಾಯದ ಹೆಸರಿನಲ್ಲಿ ಕಲುಷಿತವಾದಲ್ಲಿ ಇದಕ್ಕೆ ಯಾರು ಹೊಣೆ? ವ್ಯಾಪಾರ ಚಿಂತನೆ ಆಧರಿಸಿ ಕುಶಲಕರ್ಮಿಗಳು ಬಣ್ಣಾಕರ್ಷಣೆ ನೀಡಿ ಲಾಭ ಪಡೆಯುತ್ತಾರೆ. ಬಣ್ಣ ಲೇಪಿತ ಗಣೇಶಮೂರ್ತಿಗಳು ಅನಿವಾರ್‍ಯವಾಗಿ ಮಾರುಕಟ್ಟೆಗೆ ಬಂದಿಳಿಯುತ್ತವೆ. ಮಣ್ಣಿನಿಂದಷ್ಟೇ ಮೈದಳೆದ ಬಣ್ಣರಹಿತ ಮಡಿಗಣಪನಿಗೆ ಸಾಂಪ್ರದಾಯಕವಾಗಿಯೂ ಮನ್ನಣೆ ನೀಡಲಾಗುತ್ತದೆ. ಬಣ್ಣದಲ್ಲಿನ ರಾಸಾಯನಿಕ ಪದಾರ್ಥಗಳು ನೀರಿಗೆ ವಿಲೀನವಾಗುವುದು ತಪ್ಪುವುದರಿಂದಾಗಿ, ಪರಿಸರಸ್ನೇಹಿಯಾಗಿ ಮನಗೆಲ್ಲುತ್ತದೆ’ ಎಂದು ಕೊತ್ತನೂರು ಗ್ರಾಮದ ಸ್ನೇಕ್ ನಾಗರಾಜ್ ತಿಳಿಸಿದರು.