ಯಾವುದೇ ಕಾರಣಕ್ಕೂ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸಬಾರದು ಒಂದು ವೇಳೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ರಸ್ತೆ ನಿರ್ಮಿಸಲು ಮುಂದಾದಲ್ಲಿ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ನೇರ ಕಾರಣ ಎಂದು ಅಪ್ಪೇಗೌಡನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೇ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸಲು ಮುಂದಾದ ಅಧಿಕಾರಿಗಳನ್ನು ಶನಿವಾರ ಗ್ರಾಮಸ್ಥರು ತಡೆದು ವಾಪಸ್ ಕಳುಹಿಸಿದ ಹಿನ್ನಲೆಯಲ್ಲಿ ಸೋಮವಾರ ಪೊಲೀಸರ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಎಂ.ಮನೋರಮಾ ಹಾಗು ಅಧಿಕಾರಿಗಳ ತಂಡಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿ ಮಾತನಾಡಿದರು.
ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸುಮಾರು ೪೯ ಎಕರೆ ಗೋಮಾಳವಿದ್ದು ಈ ಪೈಕಿ ೧೦ ಎಕರೆ ಜಾಗವನ್ನು ಗ್ರಾಮದ ಸರ್ಕಾರಿ ಶಾಲೆಗಾಗಿ ಹಾಗು ೧೦ ಎಕರೆಯನ್ನು ಮೊರಾರ್ಜಿ ದೇಸಾಯಿ ವಸತಿ ನಿಲಯದ ನಿರ್ಮಾಣಕ್ಕೆ ಈಗಾಗಲೇ ಮೀಸಲಿಡಲಾಗಿದೆ. ಇನ್ನುಳಿದ ಸ್ವಲ್ಪ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಗ್ರಾಮದ ಗೋಮಾಳವನ್ನು ಮೊದಲು ಸರ್ವೇ ಮಾಡುವ ಮೂಲಕ ತಾಲ್ಲೂಕು ಆಡಳಿತ ಗುರುತಿಸಿ. ನಂತರ ಬೇಕಾದರೆ ಸಾರ್ವಜನಿಕ ಸೌಕರ್ಯಕ್ಕಾಗಿ ಅದನ್ನು ಬಳಸಲಿ, ಅದು ಬಿಟ್ಟು ಕೇವಲ ಪ್ರಭಾವಿಗಳ ಮಾತಿಗೆ ಬೆಲೆ ಕೊಟ್ಟು ಗೋಮಾಳದಲ್ಲಿ ರಸ್ತೆ ನಿರ್ಮಿಸುವ ಮೂಲಕ ಸರ್ಕಾರಿ ಗೋಮಾಳವನ್ನು ಖಾಸಗಿಯವರ ಅನುಕೂಲಕ್ಕಾಗಿ ಬಳಸಲು ಯಾವುದೇ ಕಾರಣಕ್ಕೂ ಗ್ರಾಮಸ್ಥರು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸ್ಥಳಕ್ಕೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿ ಗ್ರಾಮದ ಒಟ್ಟು ೪೯ ಎಕರೆ ಗೋಮಾಳ ಜಾಗದ ಸರ್ವೇ ಕಾರ್ಯ ನಡೆಸಿ ಕಲ್ಲುಗಳನ್ನು ನೆಡುವಂತೆ ಸೂಚಿಸಿದರು. ಒಂದು ವೇಳೆ ಸರ್ವೇ ಕಾರ್ಯ ಮಾಡದೆಯೇ ಗ್ರಾಮಸ್ಥರ ಗಮನಕ್ಕೆ ಬಾರದಂತೆ ತಾವು ರಸ್ತೆ ಕಾಮಗಾರಿ ಮಾಡಲು ಮುಂದಾದರೆ ಇಲ್ಲಿ ಆಗುವ ಅನಾಹುತಗಳಿಗೆ ನೀವೇ ಕಾರಣಕರ್ತರು ಎಂದು ಎಚ್ಚರಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ.ಎಂ.ಮನೋರಮಾ ನಾಲ್ಕೈದು ದಿನಗಳ ಒಳಗೆ ಗೋಮಾಳದ ಸರ್ವೇ ಕಾರ್ಯ ಮಾಡಿಸಿ ನಂತರ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವಿಪ್ರಕಾಶ್, ಗ್ರಾಮಸ್ಥರಾದ ಆನಂದಮೂರ್ತಿ, ಅಂಬರೀಶ್, ಸಂಪತ್, ಮಧು, ರಾಜಪಟೇಲಪ್ಪ, ಕಾಮೇಶ್, ಉಮೇಶ್, ಮುನಿರಾಜು, ಪಾಪಣ್ಣ, ಗಂಗಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.