Home News ಗೊಂಬೆ ತಯಾರಿಕಾ ಪಾಠ

ಗೊಂಬೆ ತಯಾರಿಕಾ ಪಾಠ

0

ವ್ಯಾಪಾರಕ್ಕೆ ಕುಳಿತ ಶೆಟ್ಟಿ ದಂಪತಿಗಳು, ಅವರ ವ್ಯಾಪಾರೀ ವಸ್ತುಗಳು, ಆಟಿಕೆಗಳು, ಪ್ರಾಣಿಗಳು, ಪಕ್ಷಿಗಳು, ದೇವಾನು ದೇವತೆಗಳು, ಪದ್ಮಾವತಿ ಪರಿಣಯ, ಗೋಕುಲದ ಶ್ರೀಕೃಷ್ಣ, ದಶಾವತಾರ, ಕಾಳಿಂಗಮರ್ಧನ, ಕೈಲಾಸ, ಅನಂತಪದ್ಮನಾಭ, ಹಣ್ಣುಗಳು ಮುಂತಾದ ಗೊಂಬೆಗಳು ಸಾಲುಸಾಲಾಗಿ ಜೋಡಿಸಿಡಲಾಗಿದೆ. ಪೈರನ್ನು ಬೆಳೆಸಿ ಹಸುರನ್ನೂ ಮೂಡಿಸಿದ್ದಾರೆ.
22oct6ನಗರದ ಗೌಡರ ಬೀದಿಯ ಡಿ. ಪಾರ್ಥಸಾರಥಿ ಮತ್ತು ಮಂಜುನಾಥ ಅವರ ಮನೆಯಲ್ಲಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಿಟ್ಟು ವಿವಿಧ ತಿಂಡಿಗಳನ್ನು ಮಾಡಿಟ್ಟು ಆಚರಿಸಲಾಗಿದೆ. ಹಲವಾರು ವರ್ಷಗಳಿಂದ ಗೊಂಬೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಅವರ ಮನೆಯಲ್ಲಿನ ಮಹಿಳೆಯರು ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಗೊಂಬೆ ಹಬ್ಬಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಿದ್ದಾರೆ. ಗೊಂಬೆ ವೀಕ್ಷಿಸಲು ಬರುವ ಮಕ್ಕಳಿಗೆ ಸಿಹಿ ಹಂಚಿ, ಕಲಿಯುವ ಆಸಕ್ತಿಯುಳ್ಳವರಿಗೆ ಕಲಿಸುತ್ತಾ, ಗೊಂಬೆಗಳ ಮೂಲಕ ಹಲವು ಕಥೆಗಳನ್ನು ತಿಳಿಸುತ್ತಿದ್ದಾರೆ.
‘ನಮ್ಮ ಮನೆಯಲ್ಲಿ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಈ ಗೊಂಬೆ ಹಬ್ಬವನ್ನು ಆಚರಿಸುವುದು ರೂಢಿಯಲ್ಲಿದೆ. ನಾವು ಹೋದೆಡೆಯಲ್ಲೆಲ್ಲಾ ಗೊಂಬೆಗಳನ್ನು ಮತ್ತು ಅವುಗಳನ್ನು ಅಲಂಕರಿಸಲು ಬೇಕಾದ ವಸ್ತುಗಳನ್ನು ಹುಡುಕುತ್ತೇವೆ. ಮನೆಯಲ್ಲಿ ಗೊಂಬೆಗಳನ್ನು ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ತಯಾರಿಸುತ್ತೇವೆ ಹಾಗೂ ಅಲಂಕರಿಸುತ್ತೇವೆ. ಗೊಂಬೆಗಳನ್ನು ನೋಡಲು ಬರುವ ಮಕ್ಕಳಿಗೆ ಸಿಹಿ ನೀಡಿ ಕಥೆ ಹೇಳುತ್ತೇವೆ. ಮನೆಯ ಹತ್ತಿರದ ಕೆಲ ಮಕ್ಕಳು ಕುಸುರಿ ಕೆಲಸ, ಗೊಂಬೆ ಅಲಂಕಾರ ಹಾಗೂ ಕಸದಿಂದ ರಸ ಎಂಬಂತೆ ಬಿಸಾಡುವ ಪದಾರ್ಥದಿಂದ ಕಲಾಕೃತಿ ಮಾಡುವುದನ್ನು ಕಲಿಸುತ್ತೇವೆ’ ಎಂದು ಡಿ.ಮಂಜುನಾಥ್ ತಿಳಿಸಿದರು.