Home News ಗೊಂಬೆಗಳ ಮೂಲಕ ಭಾರತದರ್ಶನ

ಗೊಂಬೆಗಳ ಮೂಲಕ ಭಾರತದರ್ಶನ

0

ಶಿಡ್ಲಘಟ್ಟದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ.
ಶಿಡ್ಲಘಟ್ಟದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ.

ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬವನ್ನು ನಮ್ಮ ನಾಡಿನ ಗೃಹಿಣಿಯರು ಮನೆಮನೆಗಳಲ್ಲಿ ಆಚರಿಸುವರು.
ಒರಿಸ್ಸಾದ ಮೀನುಗಾರ ದಂಪತಿಗಳು

ಅರಸರ ಕಾಲದಲ್ಲಿ ಉತ್ತುಂಗದಲ್ಲಿದ್ದ ಬೊಂಬೆಹಬ್ಬದ ಪರಿಕಲ್ಪನೆಯೂ ಈಗ ಬದಲಾಗಿದೆ. ಗೊಂಬೆ ಕೂರಿಸುವ ಬಹುತೇಕ ಮನೆಗಳಲ್ಲಿ ಪಟ್ಟದ ಗೊಂಬೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಆಧುನಿಕ ಗೊಂಬೆಗಳೇ. ಗೊಂಬೆ ಪ್ರದರ್ಶನದಲ್ಲಿ ಆಧುನಿಕ ಸಂಗತಿಗಳು, ಪ್ರಸ್ತುತ ವಿಷಯಗಳು ಮಹತ್ವ ಪಡೆಯುತ್ತಿವೆ.
ಪಟ್ಟಣದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ. ದಸರಾ ಗೊಂಬೆಗಳ ಮೂಲಕ ನಮ್ಮ ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ರಾಷ್ಟ್ರ ಪ್ರಜ್ಞೆಯನ್ನು ಸಾರುತ್ತಿದ್ದಾರೆ.
ತಂಜಾವೂರಿನ ನೃತ್ಯಗಾತಿ

ಗೊಂಬೆಹಬ್ಬದ ಕೇಂದ್ರಬಿಂದುವಾದ ಪಟ್ಟದ ಗೊಂಬೆಗಳೊಂದಿಗೆ, ಗೊಂಬೆಗಳಿಗೆ ಖ್ಯಾತಿ ಪಡೆದಿರುವ ತಂಜಾವೂರಿನ ನರ್ತಕಿ, ಶೆಟ್ಟಿ ದಂಪತಿಗಳು, ಮದುರೈನ ಮೀನಾಕ್ಷಿ ಸುಂದರೇಶ್ವರ, ಅಷ್ಟಲಕ್ಷ್ಮಿಯರು, ತಿರುಪತಿಯ ರಾಮ ಸೀತೆ ಲಕ್ಷಣ ಹನುಮ, ಅರ್ಧನಾರೀಶ್ವರ, ಬೆಂಗಳೂರಿನಿಂದ ತಂದ ದಶಾವತಾರ, ಯಕ್ಷಗಾನ, ಆಡಿಸಿ ನೋಡಿ ಬೀಳಿಸಿ ನೋಡು ಗೊಂಬೆಗಳು, ಒರಿಸ್ಸಾದ ಮೀನುಗಾರ, ಮಥುರೆಯ ಶ್ರೀಕೃಷ್ಣ, ಮೀರಾಬಾಯಿ, ರಾಜಾಸ್ಥಾನದ ಪಗಡಿಧಾರಿ ಪುರುಷ ಮತ್ತು ಸಾಂಪ್ರದಾಯಿಕ ಮಹಿಳೆ, ವೈಷ್ಣೋದೇವಿ ಮುಂತಾದ ಗೊಂಬೆಗಳು ದೇಶದ ವಿವಿಧ ರಾಜ್ಯಗಳ ವೈವಿಧ್ಯತೆಯನ್ನು ಹಾಗೂ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿವೆ. ಈ ಗೊಂಬೆಗಳನ್ನು ಹಾಗೂ ಇದರೊಂದಿಗೆ ಹಲವು ಬಗೆಯ ಗೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ ಅಲಂಕರಿಸಿದ್ದಾರೆ.
ಪಟ್ಟದ ಗೊಂಬೆಗಳು

‘ಪ್ರವಾಸಕ್ಕಾಗಿ ಹೋದ ಸ್ಥಳಗಳಿಂದೆಲ್ಲಾ ಗೊಂಬೆಗಳನ್ನು ತರುವ ಅಭ್ಯಾಸವಿದೆ. ದಸರಾ ಹಬ್ಬದ ಪ್ರಯುಕ್ತ ಈ ರೀತಿ ಸಂಗ್ರಹಿಸಿರುವ ಗೊಂಬೆಗಳನ್ನೆಲ್ಲಾ ಜೋಡಿಸಿಟ್ಟಾಗ ನಾವು ಭೇಟಿ ನೀಡಿರುವ ದೇಶದ ವಿವಿಧ ಪ್ರದೇಶಗಳು, ದೇವಾಲಯಗಳು, ಸಂಸ್ಕೃತಿ, ರೀತಿ ರಿವಾಜುಗಳು, ಉಡುಪು, ಖಾದ್ಯ ಎಲ್ಲವೂ ಚಿತ್ರಾವಳಿಯಂತೆ ಕಣ್ಮುಂದೆ ಬರುತ್ತದೆ. ದೇಶದ ಸಾಂಸ್ಕೃತಿಕ ವೈವಿಧ್ಯತೆ ಹೆಮ್ಮೆ ತರುತ್ತದೆ. ‘ನೀರಜ ಮುಖಿಗೆ ಮಡಿಲ ತುಂಬಿದರೋ…, ಮುತ್ತಿನಾರತಿ ಕರವೆತ್ತಿ ಬೆಳಗಿರೋ….’ಎಂದು ಒಕ್ಕೊರಲಿನಿಂದ ಹಾಡುತ್ತಾ ನಾವು ಚಿಕ್ಕಂದಿನಲ್ಲಿ ಮನೆಮನೆಗೆ ತೆರಳಿ ತಮ್ಮ ಗೊಂಬೆ ಬಾಗಿನದ ಡಬ್ಬಿಯನ್ನು ತುಂಬಿಸಿಕೊಳ್ಳುತ್ತಿದ್ದೆವು. ಒಂದು ದಿನ ಚಕ್ಕುಲಿ, ರವೆ ಉಂಡೆ, ಕೋಡುಬಳೆ, ಸಜ್ಜಪ್ಪ, ನಿಪ್ಪಟ್ಟು ಎಂದೆಲ್ಲಾ ಮಕ್ಕಳೇನು ದೊಡ್ಡವರ ಬಾಯಲ್ಲೂ ನೀರು ತರಿಸುವ ತಿಂಡಿಗಳನ್ನು ಮಾಡುತ್ತಿದ್ದರು. ಈಗ ಕಾಲ ಬದಲಾದಂತೆ ಆದ್ಯತೆಗಳೂ ಬದಲಾಗಿವೆ. ಆದರೆ ಮೂಲ ಆಶಯ ಹಾಗೇ ಉಳಿದಿದೆ. ನಮಗೆ ಪುರಾಣಗಳ ಬಗ್ಗೆ ತಿಳಿಸಿಕೊಟ್ಟ ಗೊಂಬೆಗಳ ಮೂಲಕ ದೇಶದ ವೈವಿಧ್ಯತೆಯನ್ನು ತಿಳಿಸಲು ಪ್ರಯತ್ನಿಸಿದ್ದೇನೆ’ ಎನ್ನುತ್ತಾರೆ ಡಾ. ಡಾ.ರೋಹಿಣಿ ರವಿಶಂಕರ್‌.
–ಡಿ.ಜಿ.ಮಲ್ಲಿಕಾರ್ಜುನ.