Home News ಗೇಟ್ವಾಲನ್ನು ಹೊಡೆದು ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ ಜನರು

ಗೇಟ್ವಾಲನ್ನು ಹೊಡೆದು ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ ಜನರು

0

ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುತ್ತಿಲ್ಲ ಎಂದು ದೂರಿ ಗಾಂಧಿನಗರದ ವಾಸಿಗಳು ಕುಡಿಯುವ ನೀರಿನ ಪೈಪ್ಲೈನ್ಗೆ ಅಳವಡಿಸಿದ್ದ ಗೇಟ್ವಾಲನ್ನು ಹೊಡೆದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಗರದ ಇದ್ಲೂಡು ರಸ್ತೆಯ ಗಾಂಧಿನಗರದ ೧೨ನೇ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಮುಖ್ಯ ಪೈಪ್ಲೈನ್ಗೆ ಕೆಲವರು ಮೋಟಾರ್ಗಳನ್ನ ಅಳವಡಿಸಿಕೊಂಡಿರುವುದರಿಂದ ನಮಗೆ ನೀರೆ ಪೂರೈಕೆಯಾಗುತ್ತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಮೂರು ತಿಂಗಳ ಹಿಂದೆಯೆ ಒಮ್ಮೆ ಪ್ರತಿಭಟನೆ ಮಾಡಿ ನೀರಿನ ಸಮಸ್ಯೆ ಕುರಿತು ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಏನೂ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ ಕಳೆದ ಹಲವು ತಿಂಗಳುಗಳಿಂದಲೂ ಸಮಸ್ಯೆ ನಿವಾರಣೆಯಾಗದೆ ಉಳಿದಿದೆ ಎಂದರು.
ಗಾಂಧಿನಗರದ ನಗರಸಭೆಯಿಂದ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಿದೆ. ಆದರೆ ಮುಖ್ಯ ಪೈಪ್ಲೈನ್ಗೆ ಕೆಲವು ಪ್ರಭಾವಿಗಳು ಮೋಟಾರ್ನ್ನು ಅಳವಡಿಸಿಕೊಂಡು ತಮ್ಮ ಮನೆಗಳ ಸಂಪ್ಗೆ ಸಂಪರ್ಕ ಕೊಟ್ಟುಕೊಂಡಿದ್ದಾರೆ. ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿಗೆ ಬೇಕಾಗುವಷ್ಟು ನೀರನ್ನು ಅವರು ತುಂಬಿಸಿಕೊಳ್ಳುವವರೆಗೂ ಬೇರೆ ಯಾರಿಗೂ ಅಲ್ಲಿ ನೀರು ಸಿಗುವುದಿಲ್ಲ.
ಈ ಬಗ್ಗೆ ಈ ಏರಿಯಾದ ವಾಟರ್ ಮನ್ಗಳಿಗೆ ಸಾಕಷ್ಟು ಬಾರಿ ಹೇಳಿದ್ದರೂ ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹಾಗಾಗಿ ನಮಗೆ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ. ೧೫-–೨೦ದಿನಕ್ಕೊಮ್ಮೆ ನೀರು ಬರಲಿದ್ದು ಆ ನೀರೆಲ್ಲವೂ ದೊಡ್ಡ ಮನೆಗಳ ಸಂಪ್ಗೆ ಹರಿಯುತ್ತಿವೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಸ್ಯೆ ಕುರಿತು ನಗರಸಭೆ ಅಧಿಕಾರಿಗಳಿಗೆ ಮಾತ್ರವೇ ಅಲ್ಲ ಈ ವಾರ್ಡಿನ ಸದಸ್ಯರ ಗಮನಕ್ಕೂ ತಂದಿದ್ದೇವೆ. ಅಧಿಕಾರಿಗಳಾಗಲಿ, ನಗರಸಭೆ ಸದಸ್ಯರಾಗಲಿ ಯಾರೂ ನಮ್ಮ ಸಮಸ್ಯೆಯನ್ನು ಕಿವಿಗೆ ಹಾಕಿಕೊಳ್ಳುತ್ತಲೂ ಇಲ್ಲ. ಪರಿಹರಿಸುವ ಗೋಜಿಗೂ ಹೋಗುತ್ತಿಲ್ಲ ಎಂದು ದೂರಿದರು.
ನಗರಸಭೆ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರಿಗೆ ಕರೆ ಮಾಡಿದರೂ ಯಾರೊಬ್ಬರೂ ಅಲ್ಲಿಗೆ ಬರಲಿಲ್ಲ. ಬಹಳಷ್ಟು ಸಮಯ ಕಾದು ಬೇಸತ್ತ ಜನರು ಗೇಟ್ವಾಲ್ನ್ನು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಬೇಸತ್ತ ಅವರು ನಗರಸಭೆ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ನಬರಸಭೆ ಅಧಿಕಾರಿಗಳು ವಾರದೊಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಬಡಾವಣೆಯ ವಾಸಿಗಳಾದ ದೇವರಾಜ್, ಹರೀಶ್, ಲೀಲಮ್ಮ, ವಸಂತಮ್ಮ, ನಾರಾಯಣಮ್ಮ, ಸುನಂದಮ್ಮ, ನಸ್ರೀನ್, ಪ್ರಭಾವತಿ, ಮಂಜುಳಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.