ಡಿಸೆಂಬರ್ 27 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ರಣತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.
ತೀವ್ರ ಪ್ರತಿಷ್ಠೆಗಳ ನಡುವೆ ಸಲ್ಲಿಕೆಯಾಗಿರುವ ನಾಮಪತ್ರಗಳು, ಪ್ರಮುಖ ರಾಜಕೀಯ ಪಕ್ಷಗಳಲ್ಲಿನ ಗುಂಪುಗಾರಿಕೆಗಳು, ಟಿಕೆಟ್ ಸಿಗದೆ ನಿರಾಸೆಗೊಂಡಿರುವ ಆಕಾಂಕ್ಷಿಗಳ ಬೆಂಬಲಿಗರ ಪರ್ಯಾಯ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸಲ್ಲಿಕೆ ಮಾಡಿಸಿ ನಂತರ ನಾಮಪತ್ರಗಳನ್ನು ಪಡೆದುಕೊಂಡಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸ್ಪರ್ಧೆ ನಡೆಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್‍ಕುಮಾರ್, ಹಾಗೂ ಜೆಡಿಎಸ್ ಪಕ್ಷದಿಂದ ಸ್ಪರ್ದೆ ನಡೆಸಿರುವ ಮನೋಹರ್, ಮತ್ತು ಬಿಜೆಪಿಯಿಂದ ತಮ್ಮ ಅದೃಷ್ಟದ ಪರೀಕ್ಷೆಗೆ ಇಳಿದಿರುವ ರಾಮೇಗೌಡ, ಇವರ ನಡುವೆ ತ್ರಿಕೋನ ಹಣಾಹಣಿ ಉಂಟಾಗಿದೆ, ಈ ಚುನಾವಣೆಯಲ್ಲಿ ಮತಗಳನ್ನು ಚಲಾಯಿಸುವಂತಹ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಹಾಗೂ ನಗರಸಭೆ/ಪುರಸಭೆಗಳ ಸದಸ್ಯರು, ಹಾಗೂ ನಾಮಿನಿ ಸದಸ್ಯರುಗಳಿಗೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಂದ ಇನ್ನಿಲ್ಲದ ಬೇಡಿಕೆಗಳು ಬರತೊಡಗಿವೆ.
ಈ ಮಧ್ಯೆ ಕಾಂಗ್ರೆಸ್, ಜೆಡಿಎಸ್, ಪಕ್ಷಗಳಲ್ಲಿನ ಆಂತಕರಿಕ ಒಡಕನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಕೆಲವು ನಾಯಕರುಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಾದರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ನಂಜೇಗೌಡ ನಾಮಪತ್ರವನ್ನು ವಾಪಸ್ಸು ಪಡೆದುಕೊಂಡಿರುವ ರಾಜಕೀಯವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಶ್ರೀನಿವಾಸಪುರ ಶಾಸಕ ರಮೇಶ್‍ಕುಮಾರ್, ತಾವು ಸೂಚಿಸಿದ ವ್ಯಕ್ತಿಗೆ ಟಿಕೆಟ್ ನೀಡಲಿಲ್ಲವೆಂಬ ಅಸಮಾಧಾನವನ್ನು ಹೊಂದಿದ್ದರೆ, ಶಿಡ್ಲಘಟ್ಟದ ಮಾಜಿ ಶಾಸಕ ವಿ.ಮುನಿಯಪ್ಪ ಅವರಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ಗೌರಿಬಿದನೂರು ಶಾಸಕ ಎನ್.ಹೆಚ್.ಶಿವಶಂಕರೆಡ್ಡಿ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಎಂ.ಸಿ.ಸುಧಾಕರ್, ಸೇರಿದಂತೆ ವಿ.ಮುನಿಯಪ್ಪ ಬೆಂಬಲಿಗರು, ಯಾರಿಗೆ ಮತಗಳನ್ನು ಚಲಾವಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ, ಕೋಲಾರದ ಸಂಸದ ಕೆ.ಹೆಚ್. ಮುನಿಯಪ್ಪ, ಹಾಗೂ ಚಿಕ್ಕಬಳ್ಳಾಪುರದ ಸಂಸದ ಎಂ.ವೀರಪ್ಪಮೊಯ್ಲಿ ಅವರಿಬ್ಬರೂ ಕೊನೆಯ ಕ್ಷಣದವರೆಗೂ ತಾವು ಸೂಚಿಸಿದ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂದು ನಡೆಸಿದಂತಹ ಹೋರಾಟದಲ್ಲಿ ಕೆ.ಹೆಚ್. ಮುನಿಯಪ್ಪ ಪಕ್ಷದ ಹೈಕಮಾಂಡ್‍ನ ಸಹಕಾರದಿಂದ ತಮ್ಮ ಕಟ್ಟಾ ಬೆಂಬಲಿಗ ಅನಿಲ್‍ಕುಮಾರ್‍ಗೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದು, ವೀರಪ್ಪಮೊಯ್ಲಿ ಅವರಿಗೆ ಹಿನ್ನಡೆಯಾಗಿದೆ, ಶತಾಯಗತಾಯ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂಬ ಆಲೋಚನೆಯಲ್ಲಿ ತೊಡಗಿರುವ ಕೆ.ಹೆಚ್. ಮುನಿಯಪ್ಪ, ಸಂಘಟನೆಯಲ್ಲಿ ತೊಡಗಿಸಿಕೊಂಡು ರಣತಂತ್ರ ರೂಪಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಶಾಸಕ ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಕೋಲಾರದ ಶಾಸಕ ವರ್ತೂರು ಪ್ರಕಾಶ್, ಮುಳಬಾಗಿಲಿನ ಶಾಸಕ ಮಂಜುನಾಥ್, ಮಾಲೂರಿನ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ, ಶ್ರೀನಿವಾಸಪುರ ಶಾಸಕ ರಮೇಶ್‍ಕುಮಾರ್, ಬೆಂಬಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ಪಕ್ಷದ ಮುಖಂಡರದ್ದಾಗಿದ್ದು, ಇತ್ತಿಚೆಗೆ ಸಂಸದರ ಜೊತೆಯಲ್ಲೆ ಒಡನಾಟವಿಟ್ಟುಕೊಂಡಿರುವ ಜೆಡಿಎಸ್ ಪಕ್ಷದ ಶಾಸಕರಾದ ಶಿಡ್ಲಘಟ್ಟದ ಎಂ.ರಾಜಣ್ಣ, ಚಿಂತಾಮಣಿಯ ಕೃಷ್ಣಾರೆಡ್ಡಿ, ಅವರು ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ, ಶಿಡ್ಲಘಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯ್ತಿಗಳು ಕಾಂಗ್ರೆಸ್ ಬೆಂಬಲಿತವಾಗಿದ್ದು, ಶಾಸಕರೂ ಕೂಡಾ ಯಾವ ರೀತಿಯಾದ ತಂತ್ರಗಾರಿಕೆಯನ್ನು ಅನುಸರಿಸುತ್ತಾರೆಂಬುದನ್ನು ಕಾದು ನೋಡಬೇಕಾಗಿದ್ದು, ಈ ಚುನಾವಣೆ ಜನವರಿ ತಿಂಗಳಿನಲ್ಲಿ ನಡೆಯಬಹುದಾದ ಜಿಲ್ಲಾ ಪಂಚಾಯ್ತಿ, ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ದಿಕ್ಸೂಚಿಯಾಗಲಿದೆಯೆಂದೇ ಬಿಂಬಿಸಲಾಗುತ್ತಿದ್ದು, ಮುಂದೆ ಏನಾಗುತ್ತದೆ ಯಾವ ಯಾವ ನಾಯಕರು ಯಾವ ಯಾವ ರೀತಿಯಾದ ತಂತ್ರಗಾರಿಕೆ ನಡೆಸುತ್ತಾರೆ ಎಂಬುದನ್ನು ಕಾದುನೋಡುವ ಉತ್ಸುಕದಲ್ಲಿ ಜನತೆ ಕಾಯುತ್ತಿದ್ದಾರೆ.
- Advertisement -
- Advertisement -
- Advertisement -
- Advertisement -