ಹಾಲು ಉತ್ಪಾದಕರು ಪೂರೈಕೆ ಮಾಡುತ್ತಿರುವ ಗುಣಮಟ್ಟದ ಹಾಲಿನಿಂದಲೇ ಒಕ್ಕೂಟಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಕೆ.ಎಂ.ಎಫ್.ಅಧ್ಯಕ್ಷ ಪಿ.ನಾಗರಾಜು ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಕೋಚಿಮುಲ್ ಹಾಗೂ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಪಿ.ಟಿ.ಎಸ್.ಯೋಜನೆಯ ಎಲ್ಲಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ಪಿ.ಡಿ.ಎಸ್.ಯೋಜನೆಯಲ್ಲಿ ಜನಿಸಿರುವ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬರಗಾಲ ಪೀಡಿತ ಪ್ರದೇಶವಾಗಿದ್ದರೂ ಕೂಡಾ ಬಹಳಷ್ಟು ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡುವಂತಹ ತಳಿಯ ಹಸುಗಳನ್ನು ಹೊಂದಿರುವ ಈ ಭಾಗದ ರೈತರುಗಳು, ಹಣಕಾಸಿನ ತೊಂದರೆಯಿಂದಾಗಿ ಉತ್ತಮ ತಳಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರಾಸುಗಳಿಗೆ ನೀಡುವಂತಹ ಮೇವುಗಳು ಬಹಳ ಮುಖ್ಯವಾಗುತ್ತದೆ, ಈ ಭಾಗದಲ್ಲಿ ನೀರಿನ ಅಭಾವದಿಂದಾಗಿ ಮೇವುಗಳ ಕೊರತೆ ತೀವ್ರವಾಗಿ ಕಾಡುತ್ತಿರುವುದರಿಂದ ಹಾಲಿನ ಪ್ರಮಾಣವು ಕಡಿಮೆಯಾಗುವ ಸ್ಥಿತಿ ಬರಬಹುದಾಗಿದೆ ಈ ನಿಟ್ಟಿನಲ್ಲಿ ನಮ್ಮ ಒಕ್ಕೂಟದಲ್ಲಿ ರಾಸುಗಳಿಗೆ ಅವಶ್ಯವಾಗಿರುವ ಪೌಷ್ಟಿಕಾಂಶಯುಕ್ತವಾದ ಪಶುಆಹಾರವನ್ನು ಸಿದ್ದಪಡಿಸುತ್ತಿದ್ದು, ರೈತರು ಖರೀದಿ ಮಾಡಿ ರಾಸುಗಳಿಗೆ ನೀಡಿ ಉತ್ತಮಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ತೀವ್ರ ನೀರಿನ ಕೊರತೆಯಿಂದಾಗಿ ಈ ಭಾಗದ ರೈತರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಲು ಪರದಾಡುವಂತಾಗಿದೆ, ಹಸುವಿನ ಹಾಲಿನಲ್ಲಿ ಪ್ಲೋರೈಡ್‌ನ ಅಂಶ ಕಂಡು ಬರುತ್ತಿದೆ ಎಂಬ ಆತಂಕಗಳು ರೈತರನ್ನು ಕಾಡತೊಡಗಿವೆ. ೧೪೦೦ ಅಡಿಗಳು ಕೊರೆದರೂ ನೀರಿನ ಮೂಲಗಳು ಕಾಣಿಸದೆ ಇರುವುದರಿಂದ ನೀರಿಗೆ ಹಾಹಾಕಾರ ಉಂಟಾಗುತ್ತಿರುವುದರಿಂದ ಮೇವುಗಳಿಗೂ ಸಮಸ್ಯೆಯಾಗುತ್ತಿದೆ, ಈ ನಿಟ್ಟಿನಲ್ಲಿ ಕೆ.ಎಂ.ಎಫ್.ಒಕ್ಕೂಟ ಈ ಭಾಗದ ರೈತರ ನೆರವಿಗೆ ಧಾವಿಸಬೇಕಾಗಿದೆ, ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಈ ಭಾಗದ ರೈತರನ್ನು ಉಳಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿ.ಸಿ.ಸಿ.ಬ್ಯಾಂಕಿನಿಂದ ತುಮ್ಮನಹಳ್ಳಿ, ಎ.ಹುಣಸೇನಹಳ್ಳಿ, ಮಲ್ಲಿಶೆಟ್ಟಿಪುರ ಹಾಗೂ ಮುಗಲಡಪಿ ಸಹಕಾರ ಸಂಘಗಳಿಗೆ ೩೭ ಲಕ್ಷ ರೂಪಾಯಿಗಳ ಸಾಲವನ್ನು ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸಹಕಾರ ಸಂಘಗಳಿಗೆ ಸಾಲವನ್ನು ವಿತರಣೆ ಮಾಡಲಾಗುತ್ತದೆ, ಸಹಕಾರ ಸಂಘಗಳು ಡಿ.ಸಿ.ಸಿ.ಬ್ಯಾಂಕುಗಳಲ್ಲಿ ವ್ಯವಹರಿಸಬೇಕು ಎಂದು ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ಹಾಲು ಉತ್ಪಾದಕಕ ಸಹಕಾರ ಸಂಘಗಳಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡಿದ್ದ ಸಂಘಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಕೋಚಿಮುಲ್ ಅಧ್ಯಕ್ಷ ಜೆ.ಕಾಂತರಾಜ್, ನಿರ್ದೇಶಕ ಬಂಕ್ ಮುನಿಯಪ್ಪ, ಕೆ.ಎಂ.ಎಫ್.ನ ಸಿ.ಇ.ಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮ್‌ನಾಥ್, ನಿರ್ದೇಶಕ ಕೆ.ವಿ.ನಾಗರಾಜ್, ಕೆ. ಅಶ್ವಥ್ಥರೆಡ್ಡಿ, ಆರ್.ರಾಮಕೃಷ್ಣೇಗೌಡ, ವೈ.ಬಿ. ಅಶ್ವಥ್ಥನಾರಾಯಣ, ಸುನಂದಮ್ಮ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಕೋಚಿಮುಲ್ ಉಪವ್ಯವಸ್ಥಾಪಕರಾದ ಕೆ.ಜಿ.ಈಶ್ವರಯ್ಯ, ಗೋಪಾಲರಾವ್, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.