ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಠ ಜಾತಿ ಹಾಗೂ ಪಂಗಡದ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ಪಂಪ್ ಮತ್ತು ಮೋಟರ್ ಹಾಗೂ ಪೂರಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಗಂಗಾ ಕಲ್ಯಾಣ ಯೋಜನೆಯಲ್ಲಿ ನೀಡುತ್ತಿದ್ದ ೧.೫ ಲಕ್ಷ ಸಹಾಯಧನವನ್ನು ಸರ್ಕಾರ ಇದೀಗ ೩.೫ ಲಕ್ಷಕ್ಕೇರಿಸಿದೆ. ಈ ಭಾಗದ ಆರ್ಥಿಕವಾಗಿ ಹಿಂದುಳಿದ ಎಸ್ಸಿ ಮತ್ತು ಎಸ್ಟಿ ಜನಾಂಗದ ಸುಮಾರು ೫೩ ಕೊಳವೆಬಾವಿಗಳ ಪೈಕಿ ೫೧ ರಲ್ಲಿ ನೀರು ದೊರೆತಿರುವುದು ಸಂತೋಷದ ವಿಷಯ. ಇದೀಗ ಇಲಾಖೆಯಿಂದ ನೀಡುತ್ತಿರುವ ಮೋಟರ್ ಪಂಪು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲು ಯಾವುದೇ ಮಧ್ಯವರ್ತಿಗಳ ಮಾತಿಗೆ ಮರುಳಾಗಬೇಡಿ. ಯಾವುದೇ ಕಾರಣಕ್ಕೂ ಯಾರೊಬ್ಬರಿಗೂ ಹಣ ನೀಡಬಾರದು ಎಂದು ಎಚ್ಚರಿಸಿದರು.
ಇನ್ನು ಇಲಾಖೆಯ ಕೆಲ ಅಧಿಕಾರಿಗಳು ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಶಾಸಕರ ಪತ್ರ ತೆಗೆದುಕೊಂಡು ಬನ್ನಿ ನಿಮಗೆ ಕೊಳವೆಬಾವಿ ಹಾಕಿಸಿಕೊಡುತ್ತೇನೆ ಎಂದು ಹೇಳಿ ಹಣ ಕೀಳುವ ಕಾಯಕ ರೂಡಿಸಿಕೊಂಡಿರುವುದು ಗಮನಕ್ಕೆ ಬಂದಿದ್ದು ಫಲಾನುಭವಿಗಳು ಯಾರೊಬ್ಬರೂ ಅಧಿಕಾರಿಗಳಿಗಾಗಲಿ ಅಥವ ಮಧ್ಯವರ್ತಿಗಳಿಗೆ ಹಣ ನೀಡಬೇಡಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ದುರ್ಬಲರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ನೀಡುತ್ತಿರುವ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ತಾಲ್ಲೂಕಿನ ಸುಮಾರು ೫೧ ಫಲಾನುಭವಿಗಳಿಗೆ ಮೋಟರ್, ಪಂಪು ಹಾಗು ಪೂರಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ನಗರಸಭೆ ಅಧ್ಯಕ್ಷ ಅಪ್ಸರ್ ಪಾಷ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ನಿಗಮದ ವ್ಯವಸ್ಥಾಪಕಿ ಕಾಮಾಕ್ಷಿ, ಮುಖಂಡರಾದ ಡಿ.ಬಿ.ವೆಂಕಟೇಶ್, ಮುನಿನಾರಾಯಣಪ್ಪ, ರವಿ, ರಮೇಶ್, ಲಕ್ಷ್ಮಿನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -