Home News ಕ.ಸಾ.ಪ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮ

ಕ.ಸಾ.ಪ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮ

0

ಪ್ರತಿಯೊಂದು ಗ್ರಾಮದಲ್ಲೂ ಗ್ರಂಥಾಲಯ ಓದುವ ಅಭಿರುಚಿಯನ್ನು ಬೆಳೆಸುವ ಕೇಂದ್ರವಾಗಲಿ. ಈ ನಿಟ್ಟಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೋಬಳಿ ಘಟಕಗಳನ್ನು ಸ್ಥಾಪಿಸುವ ಮೂಲಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಗ್ರಾಮೀಣ ಜನರನ್ನು ಮುಟ್ಟುವ ಉದ್ದೇಶವನ್ನಿರಿಸಿಕೊಂಡಿರುವುದು ಅಭಿನಂದನೀಯ. ಗ್ರಾಮಗಳಲ್ಲಿ ಯುವಜನರಿಗೆ, ವಿದ್ಯಾರ್ಥಿಗಳಿಗೆ ಓದುವ ಅಭಿರುಚಿಯನ್ನು ಬೆಳೆಸುವ, ಆ ಮೂಲಕ ಕನ್ನಡವನ್ನು ಬೆಳೆಸುವ ಕೆಲಸವನ್ನು ಮಾಡಿ. ಕನ್ನಡವನ್ನು ಕಟ್ಟುವ ಕೆಲಸ ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಹರೀಶ್.ಆರ್.ಭಟ್ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಬೇಕು. ವಿಜ್ಞಾನ ಎಲ್ಲರಲ್ಲಿಯೂ ಶಿಸ್ತನ್ನು ರೂಢಿಸುತ್ತದೆ. ಅದು ಅಡುಗೆ ಮನೆಯಿರಬಹುದು, ವಿಜ್ಞಾನ ಪ್ರಯೋಗ ಶಾಲೆಯಿರಬಹುದು ಅಥವಾ ವಿವಿಧ ಕಾರ್ಯಕ್ಷೇತ್ರವಿರಬಹುದು. ಪ್ರತಿಯೊಬ್ಬರೂ ಕನಸನ್ನು ಕಾಣುವುದು, ಮನಸ್ಸಿನಲ್ಲಿ ಲೆಕ್ಕ ಮಾಡುವುದು ತಮ್ಮ ಮಾತೃ ಭಾಷೆಯಲ್ಲಿಯೇ. ಯಾವತ್ತೂ ಭಾಷೆಯನ್ನು ಅಪಭ್ರಂಶ ಮಾಡಬಾರದು. ಕನ್ನಡದಲ್ಲಿನ ವಿಜ್ಞಾನ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದಲ್ಲಿ ಅವರು ವಿಜ್ಞಾನವನ್ನು ಪ್ರೀತಿಸುತ್ತಾರೆ. ಕವಿಗಳಾದ ಕುವೆಂಪು, ಬೇಂದ್ರೆ, ವೀ.ಸೀತಾರಾಮಯ್ಯ, ಚನ್ನವೀರ ಕಣವಿ, ಪ್ರೊ.ನಿಸಾರ್ ಅಹಮದ್ ಮುಂತಾದವರು ಪರಿಸರ, ಪಕ್ಷಿ, ಚಿಟ್ಟೆ, ಸಸ್ಯಗಳ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ತೇಜಸ್ವಿಯವರ ಕರ್ವಾಲೋ ಮುಂತಾದ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಪರಿಸರ ಪ್ರೇಮವನ್ನು ಗಟ್ಟಿಗೊಳಿಸಬಹುದು ಎಂದರು.

ಶಿಡ್ಲಘಟ್ಟದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಕ.ಸಾ.ಪ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಮತ್ತು ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿಡ್ಲಘಟ್ಟದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಕ.ಸಾ.ಪ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಮತ್ತು ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್ ಅವರು ಕನ್ನಡ ಬಾವುಟವನ್ನು ನೀಡುವ ಮೂಲಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕ.ಸಾ.ಪ ಘಟಕದ ಕಾರ್ಯಸೂಚಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಡಿ.ಜಿ.ಹರೀಶ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಾದ ವಿ.ಕೆ. ಸೌಜನ್ಯ, ಡಿ.ಎನ್. ಶ್ವೇತ ಮತ್ತು ಆರ್.ಎ. ದರ್ಶಿನಿ ಅವರನ್ನು ಕ.ಸಾ.ಪ ವತಿಯಿಂದ ಸನ್ಮಾನಿಸಿ ಪುಸ್ತಕಗಳನ್ನು ನೀಡಲಾಯಿತು. ಕ.ಸಾ.ಪ ತಾಲ್ಲೂಕು ಮತ್ತು ಹೋಬಳಿ ಪದಾಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ದತ್ತಿ ನಿಧಿಗೆ 15 ಸಾವಿರ ರೂಗಳನ್ನು ನೀಡಿದರು. ತರಬಳ್ಳಿ ಭಾಸ್ಕರರೆಡ್ಡಿ ಕ.ಸಾ.ಪ ತಾಲ್ಲೂಕು ಘಟಕಕ್ಕೆ ಶಾಲೆಗಳಲ್ಲಿ ಪುಸ್ತಕ ವಿತರಿಸಲು ಹಣ ನೀಡಿದರು.
ಜಾನಪದ ಕಲಾವಿದರಾದ ದೇವರಮಳ್ಳೂರಿನ ಮಹೇಶ್ ಮತ್ತು ಹರೀಶ್ ವಿವಿಧ ಕವಿಗಳ ಗೀತೆಗಳನ್ನು ಹಾಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ವೈ.ಎಲ್.ಹನುಮಂತರಾವ್, ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಸಾಹಿತಿಗಳಾದ ಗೋಪಾಲಗೌಡ ಕಲ್ವಮಂಜರಿ, ಕಾಗತಿ ವೆಂಕಟರತ್ನಂ, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ಅಮೃತ್ಕುಮಾರ್, ಭಾಸ್ಕರರೆಡ್ಡಿ, ವೆಂಕಟಸ್ವಾಮಿ, ಕ.ಸಾ.ಪ ತಾಲ್ಲೂಕು ಕಾರ್ಯದರ್ಶಿಗಳಾದ ಎ.ಎಂ.ತ್ಯಾಗರಾಜ್, ಎನ್.ವೆಂಕಟೇಶಪ್ಪ, ಸತೀಶ್, ಟಿ.ಸಾವಿತ್ರಮ್ಮ, ಕ.ಸಾ.ಪ ಹೋಬಳಿ ಅಧ್ಯಕ್ಷರಾದ ಆರ್.ಎ.ಉಮೇಶ್, ಎನ್.ಜಗದೀಶ್ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.