ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ನಡೆಸುವ ಮೂಲಕ ಕನ್ನಡ ಸಾಹಿತ್ಯಾಭಿರುಚಿಯನ್ನು ಯುವಕರಲ್ಲಿ ಬೆಳೆಸಲು ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜನೆ ಮಾಡಲಾಗಿದ್ದ ಕ.ಸಾ.ಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರ ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೇ, ಎಲ್ಲಾ ಸಮುದಾಯಗಳ ಸಮ್ಮಿಲನದಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಹಿತ್ಯವನ್ನು ಹಳ್ಳಿ ಹಳ್ಳಿಗೂ ತಲುಪಿಸುವಂತಹ ಕೆಲಸದ ಜೊತೆ, ಸ್ಥಳೀಯ ಸಮಸ್ಯೆಗಳ ನಿವಾರಣೆಗಾಗಿ ಧ್ವನಿಯೆತ್ತುವಂತಹ ಸಂಘಟನೆಯಾಗಬೇಕು ಎಂದರು.
ಜಿಲ್ಲಾ ಕ.ಸಾ.ಪ ನಿಕಟಪೂರ್ವ ಕಾರ್ಯದರ್ಶಿ ಅಮೃತ್ಕುಮಾರ್ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಪ್ರಪಂಚದ ಯಾವುದೇ ಭಾಷೆಗೂ ಕಲೆ, ಭಾಷೆ, ಸಂಸ್ಕೃತಿಯ ಬೆಳವಣಿಗೆಗಾಗಿ ನಮ್ಮಲ್ಲಿರುವಂತೆ ಕ.ಸಾ.ಪ ರೀತಿಯ ಪ್ರಾತಿನಿಧಿಕ ಸಂಸ್ಥೆ ಇಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಪ್ರಾಚೀನ ಹಳಗನ್ನಡದಿಂದ ಹಿಡಿದು ಇಂದಿನ ಆಧುನಿಕ ಹೊಸಗನ್ನಡದವರೆಗೆ ಅದರ ವ್ಯಾಪ್ತಿ ಹರಡಿಕೊಂಡಿದೆ. ಜಾತಿ, ಬುಡಕಟ್ಟು, ಮತ, ಧರ್ಮಗಳ ಹಿನ್ನೆಲೆಯಿಂದ ಕೂಡ ಕನ್ನಡ ಭಾಷಾರೂಪ ಭಿನ್ನತೆ ಪಡೆದಿದೆ. ಈ ವಿವಿಧತೆಗಳೇ ಕನ್ನಡದ ಶಕ್ತಿಯಾಗಿದೆ, ಕನ್ನಡ ಭಾಷಾ ಸಮೃದ್ಧಿಗೂ ಕಾರಣವಾಗಿದೆ ಎಂದ ಅವರು, ಕನ್ನಡ ಭಾಷೆಯ ಸೊಗಸು, ಬೆಳವಣಿಗೆ, ಸಾಹಿತ್ಯ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ, ಉದ್ದೇಶಗಳ ಕುರಿತಂತೆ ವಿವರಿಸಿದರು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಕ.ಸಾ.ಪ ಹೋಬಳಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಶಾಲೆಗೊಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ದತ್ತಿಗಳನ್ನು ಪ್ರಕಟಿಸಲಾಗುವುದು. ತಾಲ್ಲೂಕು ಕ.ಸಾ.ಪ ದಿಂದ ಗ್ರಾಮೀಣ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಕ.ಸಾ.ಪ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮದ ಆರಂಭದಲ್ಲಿ ಕ.ಸಾ.ಪ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಪೂಜೆ ಮಾಡಲಾಯಿತು. ಕಾರ್ಯಕ್ರಮದ ನಂತರ ಸಿಹಿ ವಿತರಿಸಲಾಯಿತು. ಅಂಧಮಕ್ಕಳ ಶಾಲೆಯಲ್ಲಿಯೂ ತಾಲ್ಲೂಕು ಕ.ಸಾ.ಪ ವತಿಯಿಂದ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳಿಗೆ ಕ.ಸಾ.ಪ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರ ಕುರಿತ ಪುಸ್ತಕಗಳನ್ನು ತಾಲ್ಲೂಕು ಕ.ಸಾ.ಪ ಘಟಕದ ವತಿಯಿಂದ ನೀಡಲಾಯಿತು.
ಕ.ಸಾ.ಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ನಗರ್ತ ಮಂಡಳಿಯ ಮುಖಂಡ ಎಸ್.ಎಸ್.ನಾಗರಾಜ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ದೈಹಿಕ ಶಿಕ್ಷಣ ಸಂಯೋಜಕ ಶ್ರೀನಿವಾಸ್, ಕ.ಸಾ.ಪ ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ತಾಲ್ಲೂಕು ಕಾರ್ಯದರ್ಶಿಗಳಾದ ತ್ಯಾಗರಾಜ್, ವೆಂಕಟೇಶಪ್ಪ, ದಾಶರಥಿ, ನಂದೀಶ್, ಕ್ರೀಡಾಪಟು ನಾರಾಯಣಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ದಾಮೋದರ್, ಸುಜಾತಮ್ಮ, ದೇವರಮಳ್ಳೂರು ಎ.ವೆಂಕೋಬರಾವ್, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಬೆಳ್ಳೂಟಿ ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -