ತಾಲ್ಲೂಕಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮಬೇಕು, ಅವರಿಗೆ ಸೂಕ್ತ ವೇದಿಕೆ, ಪ್ರೋತ್ಸಾಹ ಮತ್ತು ಉತ್ತೇಜನ ನೀಡಿ ಹುರಿದುಂಬಿಸುವ ಕೆಲಸವನ್ನು ಮಾಡಬೇಕು ಎಂದು ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಎಂ.ಮುನಿರಾಜು ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಕರಾಟೆ, ರೋಬಾಲ್, ಅಥ್ಲೆಟಿಕ್ಸ್, ಕುಸ್ತಿ ಮುಂತಾದ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿರುವ ತಾಲ್ಲೂಕಿನ 21 ಕ್ರೀಡಾಪಟುಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಬಹುತೇಕ ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೆ ಮಹತ್ವ ನೀಡುತ್ತಿಲ್ಲವಾದ್ದರಿಂದ ಕ್ರೀಡಾ ಪ್ರತಿಭೆಗಳು ಕಮರಿಹೋಗುತ್ತಿವೆ. ಎಳೆ ವಯಸ್ಸಿನಿಂದಲೇ ಮಕ್ಕಳ ಆಸಕ್ತಿಯನ್ನು ಮನಗಂಡು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ 21 ಕ್ರೀಡಾಪಟುಗಳನ್ನು ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಆರ್.ಆರ್.ಸುರೇಶ್, ಪುರುಷೋತ್ತಮ್, ರಾಜಶೇಖರ್, ಬ್ಯಾಸ್ಕೆಟ್‌ಬಾಲ್ ಆಟಗಾರ ಮುನಿಕೃಷ್ಣ, ವೆಂಕಟೇಶ್, ಮಂಜುನಾಥ, ಕರಾಟೆ ಶಿಕ್ಷಕ ಜಬೀವುಲ್ಲ, ಅರುಣ್‌ಕುಮಾರ್, ಶ್ರೀನಿವಾಸ್, ಟಿ.ಟಿ.ನರಸಿಂಹಪ್ಪ, ರವಿ, ಉಮೈತ್‌ಖಾನ್, ಶಿವಣ್ಣ, ದಾಕ್ಷಾಯಿಣಿ, ಶ್ರೀನಾಥ್, ಲಿಟಲ್ ಸ್ಟಾರ್ ಡ್ಯಾನ್ಸ್ ಶಾಲೆಯ ಶ್ರೀನಿವಾಸ್ ಮತ್ತು ತಂಡದವರು ಹಾಜರಿದ್ದರು.