ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತೆ ತಯಾರಿಸಿರುವ ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದರಿಂದ ಆರೋಗ್ಯದೊಂದಿಗೆ ಈ ಭಾಗದ ಹೈನುಗಾರಿಕೆ ಮತ್ತು ರೈತರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಬುಧವಾರ ನಗರದ ಶಿಬಿರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ನಾನಾ ಬಗೆಯ ಉತ್ಪನ್ನಗಳು ಬಣ್ಣ ಬಣ್ಣದ ಪ್ಯಾಕೇಟ್ಗಳಲ್ಲಿ ಲಭ್ಯ ಇವೆ. ಆದರೆ ಅವುಗಳನ್ನು ಲಾಭದ ದೃಷ್ಟಿಯಿಂದಷ್ಟೇ ಉತ್ಪಾದಿಸಿದ್ದು ಅವುಗಳನ್ನು ಖರೀದಿಸಿ ಸೇವಿಸುವುದರಿಂದ ತಾತ್ಕಾಲಿಕವಾಗಿ ನಾಲಿಗೆಗೆ ರುಚಿ ಸಿಗಬಹುದು. ಆದರೆ ಅವುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ಎಲ್ಲಾ ವಯೋಮಾನದ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ ಎಂದರು.
ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸಹಕಾರ ಕ್ಷೇತ್ರ, ಹಾಗು ಈ ಭಾಗದ ರೈತರ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೋಚಿಮುಲ್ನ ಪ್ರಧಾನ ವ್ಯವಸ್ಥಾಪಕ ಮುನೇಗೌಡ ಮಾತನಾಡಿ ನಗರದಲ್ಲಿ ಸುಮಾರು ೪೫ ಸಾವಿರದಷ್ಟು ಜನಸಂಖ್ಯೆಯಿದ್ದು ನಂದಿನಿ ಹಾಲಿನ ಬಳಕೆ ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಗರದ ಸರ್ಕಾರಿ ಶಾಲಾ ಮಕ್ಕಳಿಗೆ ನಂದಿನಿ ಹಾಲಿನ ಬಳಕೆಯ ಕುರಿತು ಮಾಹಿತಿ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಗಾರರಿಗೆ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಜರ್ಕಿನ್ (ಜಾಕೆಟ್) ವಿತರಿಸಿದರು.
ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಲಕ್ಮಿನಾರಾಯಣ, ಸಿಬ್ಬಂದಿ ವಿಜಯ್ಕುಮಾರ್, ಶ್ರೀನಿವಾಸ್, ಶಿಡ್ಲಘಟ್ಟ ಶಿಬಿರ ಕಚೇರಿಯ ಬೈರಾರೆಡ್ಡಿ, ಕೆ.ಎಸ್.ಕನಕಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -