ಕೇವಲ ಹಸ್ತಾಕ್ಷರ ಮಾಡುವುದಕ್ಕೆ ಸೀಮಿತಗೊಂಡಲ್ಲಿ ಸಾಕ್ಷರರಾದಂತಲ್ಲ. ಪತ್ರಿಕೆಗಳನ್ನು ಓದುವುದು, ವ್ಯವಹಾರ ಜ್ಞಾನ ರೂಢಿಸಿಕೊಳ್ಳುವಂತಾಗಬೇಕು. ಆಗ ಮಾತ್ರ ಸಾಕ್ಷರ ಭಾರತ್ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಸಾಕ್ಷರ ಭಾರತ್ ತಾಲ್ಲೂಕು ಸಂಯೋಜಕ ರಾಮಚಂದ್ರ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಸಾಕ್ಷರ ಭಾರತ್ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾವಲಂಬನೆಗೆ ಅಕ್ಷರ ಜ್ಞಾನ ಪೂರಕ. ಅಕ್ಷರ ಜ್ಞಾನವಿಲ್ಲದಿದ್ದರೆ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಲು ಸಾಧ್ಯವಾಗದು. ಸಾಕ್ಷರ ಭಾರತ್ ಕಾರ್ಯಕ್ರಮ ಯಶಸ್ವಿಯಾಗಲು ಸ್ವಯಂ ಸೇವಕರ ಪಾತ್ರ ಹಿರಿದಾಗಿದೆ. ಸ್ವಯಂಸೇವಕರು ಈಗಾಗಲೇ ಕಲಿತಿರುವುದಕ್ಕಿಂತ ಅನಕ್ಷರಸ್ಥರಿಗೆ ಕಲಿಸುವಾಗ ಕಲಿಯುವುದು ಬಹಳಷ್ಟಿದೆ. ಜ್ಞಾನವು ಬಳಸುವುದರಿಂದ ವೃದ್ಧಿಸುತ್ತದೆ. ಐಪಿಸಿಎಲ್ ವಿಧಾನ ಮತ್ತು ಹಂತಗಳನ್ನು ಬಳಸಿ ಕ್ರಿಯಾಶೀಲತೆಯಿಂದ ವೈಜ್ಞಾನಿಕ ಮತ್ತು ಕಲಾತ್ಮಕವಾಗಿ ಕಲಿಸುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಮಧ್ಯದಲ್ಲಿ ಕಲಿಕಾಕೇಂದ್ರ ತೊರೆಯುವ ನವಸಾಕ್ಷರರ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ಮಾತನಾಡಿ, ಅನಕ್ಷರಸ್ಥರಿಗೆ ಕ್ರಿಯಾತ್ಮಕ ಸಾಕ್ಷರತೆಯೊಂದಿಗೆ ಸಮಾನಶಿಕ್ಷಣ, ವೃತ್ತಿಕೌಶಲ ಒದಗಿಸುವುದು ಸಾಕ್ಷರಭಾರತ್ ಯೋಜನೆಯ ಉದ್ದೇಶವಾಗಿದ್ದು, ಇದು ಬುದ್ಧಿವಂತರಿಗಿಂತ ಹೃದಯವಂತರ ಕಾರ್ಯಕ್ರಮವಾಗಿದೆ. ಶಿಕ್ಷಣವು ಅಭಿವೃದ್ಧಿಯ ಮೂಲ ಮಂತ್ರ ಹಾಗೂ ಸಾಮಾಜಿಕ ಪರಿವರ್ತನೆಯ ಮೂಲ ಸಾಧನ. ಶಿಕ್ಷಣವನ್ನು ಅಲಕ್ಷಿಸಿ ಯಾವುದೇ ದೇಶ ಮುಂದುವರಿಯುವುದು ಸಾಧ್ಯವಿಲ್ಲ. ಶಿಕ್ಷಣವೆಂದರೆ ಪ್ರಾಣಿ ರೂಪದಲ್ಲಿರುವ ಮಾನವನನ್ನು ಮಾನವತ್ವದೆಡೆಗೆ ಒಯ್ಯುವ ಸಾಧನವಾಗಿದೆ. ಗ್ರಾಮೀಣ ಭಾರತವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಅನಕ್ಷರತೆಯು ಕೂಡ ಒಂದಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಮಾ ಶಾರದಮ್ಮ, ಸದಸ್ಯರಾದ ಎ.ಎಂ.ತ್ಯಾಗರಾಜ್, ಪ್ರೇಮ, ಕಾರ್ಯದರ್ಶಿ ಶ್ರೀನಿವಾಸ್, ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ತರಬೇತುದರ ಮಂಜುನಾಥ್, ಪ್ರೇರಕ ಮೋಹನ್, ಬಿಲ್‌ಕಲೆಕ್ಟರ್ ಶ್ರೀನಿವಾಸ್, ಮುಖ್ಯ ಶಿಕ್ಷಕಿ ಶೋಭಾ, ಅಂಬರೀಷ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -