ಕುರಿಗಳು ಮನೆಯಲ್ಲಿದ್ದರೆ ಎ.ಟಿ.ಎಂ ಇದ್ದಂತೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬುಳಕೆ ಮಾಡಿಕೊಂಡು ಕುರಿಗಳನ್ನು ಸಾಕುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಪ್ರಗತಿಪರ ಸಾಕಾಣಿಕೆ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್ ಗೌಡ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಮಂಗಳವಾರ ಪ್ರಗತಿಪರ ಕುರಿ ಸಾಕಾಣಿಕೆ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಸಾಲ ಮಂಜೂರಾತಿ ಪ್ರಮಾಣ ಪತ್ರವನ್ನು ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದ ಒಂಭತ್ತು ಮಂದಿ ಮಹಿಳೆಯರಿಗೆ ಕುರಿಗಳನ್ನು ಕೊಳ್ಳಲು ಸಾಲ ಮಂಜೂರಾತಿ ಪ್ರಮಾಣ ಪತ್ರವನ್ನು ನೀಡುತ್ತಿದ್ದೇವೆ. ಒಬ್ಬ ಮಹಿಳೆಗೆ 67,440 ರೂಗಳಂತೆ ಒಟ್ಟು ೬ ಲಕ್ಷದ ೬ ಸಾವಿರ ರೂ. ಗಳಷ್ಟು ಸಾಲವನ್ನು ನೀಡಲಾಗುತ್ತಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ. ೫೦ ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇ. ೨೫ ರಷ್ಟು ಸಹಾಯಧನವನ್ನು ಕುರಿ ಮತ್ತು ಉಣ್ಣೆ ಅಭಿವೃದ್ದಿ ಮಂಡಳಿಯಿಂದ ನೀಡಲಾಗಿದೆ ಎಂದು ಹೇಳಿದರು.
ಪ್ರಗತಿಪರ ಕುರಿ ಸಾಕಾಣಿಕೆ ಸಂಘದ ನಿರ್ದೇಶಕ ರಾಮಣ್ಣ, ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯ ತ್ಯಾಗರಾಜು, ಗ್ರಾಮಸ್ಥರಾದ ಅಂಬಿಕಾ, ರಾಧಮ್ಮ, ಲಕ್ಷ್ಮಮ್ಮ, ಭಾರತಿ, ಸುಶೀಲಮ್ಮ, ಜಿ.ಅಂಬಿಕಾ, ಮುನಿಯಮ್ಮ, ಲಕ್ಷ್ಮಮ್ಮ, ಸರಸ್ವತಮ್ಮ, ಗಾಯಿತ್ರಮ್ಮ, ಮಂಜುನಾಥ್, ಹನುಮೇಗೌಡ, ರಾಜಣ್ಣ ಮತ್ತಿತರರು ಹಾಜರಿದ್ದರು.