ಇತ್ತೀಚೆಗೆ ಮದುವೆಯಾದ ಕಿರಿಯ ಸ್ನೇಹಿತನೊಬ್ಬ ಬಹಳ ಬೇಸರದಲ್ಲಿದ್ದ. ಕಾರಣ ವಿಚಾರಿಸಿದೆ. ಮೊದಮೊದಲು ಹೇಳಲು ನಿರಾಕರಿಸಿದರೂ ನಿಧಾನವಾಗಿ ತೆರೆದುಕೊಳ್ಳತೊಡಗಿದ.
ಅವನ ಬೇಸರದ ಕಾರಣ ಇಷ್ಟು. ಶ್ರಾವಣ ಮಾಸ ಆಗಷ್ಟೇ ಪ್ರಾರಂಭವಾಗಿತ್ತು. ಬಹಳ ಧಾರ್ಮಿಕ ಮನೋಭಾವದವಳಾದ ಅವನ ಪತ್ನಿ, ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಏನಾದರೂ ಪೂಜೆ ಪುನಸ್ಕಾರಗಳನ್ನು ಇಟ್ಟುಕೊಂಡಿರುತ್ತಿದ್ದಳು. ಅಂತಹ ದಿನಗಳಲ್ಲಿ ಅವಳು ಬೇರೆ ಹಾಸಿಗೆಯಲ್ಲಿ ಮಲಗುತ್ತಿದ್ದಳು. ಹಾಗಾಗಿ ಶ್ರಾವಣ ಮಾಸ ಮುಗಿದು ಭಾದ್ರಪದ ಶುದ್ಧ ಚೌತಿಯಾಗುವವರೆಗೆ ಸ್ನೇಹಿತನಿಗೆ ಲೈಂಗಿಕ ಉಪವಾಸ!! ಇಷ್ಟೇ ಅಲ್ಲದೆ ಅಂತಹ ಬಲವಂತದ ಉಪವಾಸದ ದಿನಗಳು ಪ್ರತಿ ತಿಂಗಳಲ್ಲಿ ಆಗಾಗ ಬರುತ್ತಿತ್ತು. ಲೈಂಗಿಕ ಕ್ರಿಯೆ ಅಧಾರ್ಮಿಕವಾದದ್ದು ಎಂದು ಬಾಲ್ಯದಿಂದಲೇ ಅವಳಲ್ಲಿ ಬೇರೂರಿದ ನಂಬಿಕೆಯನ್ನು ಯಾವುದೇ ತರ್ಕದಿಂದ ಬದಲಾಯಿಸಲು ನನ್ನ ಸ್ನೇಹಿತನಿಗೆ ಸಾಧ್ಯವಾಗಿರಲಿಲ್ಲ.
ಸರಿ ನಾವೆಲ್ಲಾ ಕುಳಿತು ಧರ್ಮಗ್ರಂಥಗಳ ಸಂಶೋಧನೆ ಮಾಡಿ, ಸಂಸ್ಕøತ ಪಂಡಿತರ ಸಹಾಯ ಪಡೆದು ಧರ್ಮಕ್ಕೂ ಕಾಮಕ್ಕೂ ಇರುವ ನಂಟನ್ನು ಹುಡುಕಬೇಕಾಯಿತು. ವಿವಾಹದೊಳಗಿನ ಕಾಮಕ್ಕೆ ಧರ್ಮ ಯಾವ ಸಮಯದಲ್ಲಿಯೂ ಅಡೆತಡೆಗಳನ್ನು ಒಡ್ಡಿಲ್ಲ ಎಂದು ಸ್ನೇಹಿತ ತನ್ನ ಹೆಂಡತಿಗೆ ನಿಧಾನವಾಗಿ ಮನವರಿಕೆ ಮಾಡಿಸಿತೊಡಗಿದ.
ನನ್ನ ಸ್ನೇಹಿತನಿಗೇನೋ ಹೆಂಡತಿಯ ಬಗೆಗೆ ಬಹಳ ಪ್ರೀತಿಯಿತ್ತು ಮತ್ತು ಸಾಕಷ್ಟು ತಾಳ್ಮೆಯಿತ್ತು. ಅದಿಲ್ಲದಿದ್ದರೆ….?, ವಿವಾಹದಲ್ಲಿ ಅನಗತ್ಯ ಮನಸ್ತಾಪಗಳು ಅಥವಾ ಈ ಭಿನ್ನಾಭಿಪ್ರಾಯಕ್ಕೆ ಇನ್ನಷ್ಟು ಕಾರಣಗಳು ಸೇರಿಕೊಂಡು ಕೊನೆಗೆ ವಿಚ್ಛೇದನದತ್ತ ಪಯಣ.
ಡಾಂಬಿಕ ಮಡಿವಂತಿಕೆ
ಯಾರಾದರೂ ಲೈಂಗಿಕತೆ ಮತ್ತು ಕಾಮ ಎಂದು ಸಾರ್ವಜನಕವಾಗಿ ಮಾತನಾಡಿದ ತಕ್ಷಣ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುವುದು ಒಂದು ರೀತಿಯ ಮುಜುಗರದ ಅಥವಾ ಕಿರಿಕಿರಿಯ ಭಾವನೆ. ನಾವೇ ಇದರ ಬಗೆಗೆ ಮಾತನಾಡುವುದಿರಲಿ, ಯಾರಾದರೂ ತಜ್ಞರು ಮಾತನಾಡಿದರೂ ಅದನ್ನು ಸಹಜವಾಗಿ ಸ್ವೀಕರಿಸಲು ಸಿದ್ಧರಿರುವುದಿಲ್ಲ. ಇದು ಏಕೆ ಎನ್ನುವುದು ಚರ್ಚಗೆ ಯೋಗ್ಯವಾದ ವಿಷಯವಾದರೂ ಇದರಿಂದ ಆಗುತ್ತಿರುವ ಅಪಾಯಗಳೇನು ಎಂದು ಮನವರಿಕೆ ಮಾಡಿಕೊಳ್ಳುವುದು ಹೆಚ್ಚು ಉಪಯುಕ್ತ.
ಏಕೆ ಈ ಕೀಳರಿಮೆ?
ಲೈಂಗಿಕತೆಯನ್ನು ಕೀಳಾಗಿ ಕಾಣುವುದಕ್ಕೆ ಐತಿಹಾಸಿಕ ಕಾರಣಗಳೇನಿರಬಹುದು?
ಮೊದಲನೆಯದಾಗಿ ಲೈಂಗಿಕತೆಗೆ ಉಪಯೋಗವಾಗುವ ಅಂಗಾಂಗಗಳನ್ನು ನಾವು ಮಲ ಮೂತ್ರ ವಿಸರ್ಜನೆಯಂತಹ ಶೌಚಕ್ರಿಯೆಗೂ ಉಪಯೋಗಿಸುತ್ತೇವೆ. ಇದರಿಂದಾಗಿ ಶಿಲಾಯುಗದ ಮಾನವನ ಕಾಲದಿಂದಲೂ ಲೈಂಗಿಕತೆಗೂ ಅಶೌಚಕ್ಕೂ ಸಂಬಂಧ ಕಲ್ಪಿಸಿರುವ ಸಾಧ್ಯತೆಗಳಿವೆ. ವಿಜ್ಞಾನ ಇಷ್ಟೆಲ್ಲಾ ಬೆಳೆದ ಮೇಲೂ ನಾವು ಇನ್ನೂ ಅದೇ ತಪ್ಪು ಕಲ್ಪನೆಯನ್ನು ಅಪ್ರಜ್ಞಾಪೂರ್ವಕವಾಗಿ ಮುಂದುವರೆಸುತ್ತಿದ್ದೇವೆ.
ಅಂದರೆ ಲೈಂಗಿಕತೆ ಕೀಳು ಎಂದು ಕೆಲವು ಧರ್ಮಪ್ರಚಾರಕರು ತಪ್ಪು ತಿಳುವಳಿಕೆಗಳಿಂದ ಹೇಳುತ್ತಿದ್ದಾರೆ ಅಥವಾ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಇಂತಹ ನಂಬಿಕೆಗಳನ್ನು ಉಪಯೋಗಿಸುತ್ತಿದ್ದಾರೆ ಎಂದಾಯಿತು. ಇಂತಹ ಸಾಕಷ್ಟು ಧರ್ಮ ಪ್ರಚಾರಕರ ನಿಜ ಬಣ್ಣ ಇತ್ತೀಚೆಗೆ ಬಯಲಾಗುತ್ತಿದೆ. (ನಿತ್ಯಾನಂದ ಸ್ವಾಮಿ, ಆಸಾರಾಮ್ ಬಾಪೂಗಳಂತವರನ್ನು ನೆನಪಿಸಿಕೊಳ್ಳಿ!) ಹಿಂದೂ ಧರ್ಮದ ಮೂಲ ತತ್ವಗಳಂತೂ ಲೈಂಗಿಕತೆಯನ್ನು ಕೀಳಾಗಿಸಿರುವಂತೆ ಕಾಣುವುದಿಲ್ಲ. ಇದರ ಬಗೆಗೆ ಹೆಚ್ಚಿನ ವಿವರಣೆ ಮತ್ತು ಜಿಜ್ಞಾಸೆಗಳು ಈ ಲೇಖನದ ವ್ಯಾಪ್ತಿಗೆ ಮೀರಿದ್ದು. ಹಿಂದೂ ಧರ್ಮವನ್ನೊಳಗೊಂಡು ಎಲ್ಲಾ ಧರ್ಮಗಳೂ ಕಾಮವನ್ನು ಧರ್ಮದ ವಿರೋಧಿಯೆಂದು ತಿಳಿಯದಿದ್ದರೂ ಮುಕ್ತ ಕಾಮವನ್ನು ಅನುಮೋದಿಸಿಲ್ಲ. ಆದರೆ ಅದನ್ನು ಧರ್ಮದ ಮಿತಿಗಳಲ್ಲಿ ಮುಕ್ತವಾಗಿ ಅನುಭವಿಸುವುದಕ್ಕೆ ಯಾವುದೇ ತಡೆಗಳನ್ನೂ ಒಡ್ಡಿಲ್ಲ ಎನ್ನುವುದನ್ನು ಮರೆಯಬಾರದು.
ಹೀಗೆ ಲೈಂಗಿಕತೆಯ ಬಗೆಗಿನ ಕೀಳರಿಮೆಗೆ ಹಲವಾರು ಕಾರಣಗಳಿರಬಹುದು. ಆದರೆ ಅವೆಲ್ಲವೂ ತಪ್ಪು ಮಾಹಿತಿ ಅಥವಾ ಕಲ್ಪನೆಗಳಿಂದ ಬಂದಿರುವುದು ಎನ್ನವುದು ಮಾತ್ರ ನಿಸ್ಸಂದೇಹ.
ಏನಿದರ ಪರಿಣಾಮಗಳು?
ಹಾಗಾಗಿ ದಂಪತಿಗಳು ಈ ವಿಚಾರಗಳನ್ನು ಹೆಚ್ಚು ತಾಂತ್ರಿಕವಾಗಿಸಿಕೊಂಡು ಮನಸ್ಸನ್ನು ಕಹಿಯಾಗಿಸಿಕೊಳ್ಳಬೇಕಿಲ್ಲ. ಜೀವಿಗಳ ಲೈಂಗಿಕ ಪ್ರವೃತ್ತಿ ಕೂಡ ಭಗವಂತನ ಪ್ರಸಾದವೇ ಎಂದುಕೊಂಡು ತಮಗೆ ಅನುಕೂಲವಾದ ಸಮಯದಲ್ಲಿ, ಬೇಕಾದ ರೀತಿಯಲ್ಲಿ, ಪ್ರಶಸ್ತವೆನಿಸುವ ಸ್ಥಳದಲ್ಲಿ (ಮನೆ ಚಿಕ್ಕದಿದ್ದಾಗ ದೇವರ ಮನೆಯಲ್ಲೂ ಕೂಡ!) ಮುಕ್ತವಾಗಿ ಬೆರೆಯಲು ಪತಿಪತ್ನಿಯರು ಹಿಂಜರಿಯಬೇಕಿಲ್ಲ!!
ಮಕ್ಕಳಿಗೆ ಲೈಂಗಿಕ ಅಂಗಾಗಗಳ ಶುಚಿತ್ವವನ್ನು ಕಲಿಸುವಾಗ ಅವುಗಳು ಕೀಳು ಎನ್ನುವ ಮನೋಭಾವವನ್ನು ಬಿತ್ತಬಾರದು. ಇದರಿಂದ ಅವರ ಮುಂದಿನ ಆರೋಗ್ಯಕರ ಲೈಂಗಿಕ ಜೀವನಕ್ಕೆ ಸಹಾಯವಾಗುತ್ತದೆ.
ನಡಹಳ್ಳಿ ವಸಂತ್