ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದು ಎನ್ಎಸ್ಯುಐ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ ತಿಳಿಸಿದರು.
ನಗರದ ಹೊರವಲಯದ ಐಟಿಐ ಕಾಲೇಜಿನಲ್ಲಿ ಶುಕ್ರವಾರ ಕಾಲೇಜು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಸ್ವಾಮಿ ವಿವೇಕಾನಂದ, ಭಗತ್ಸಿಂಗ್ ರಂತಹ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೊಲಗಿಸಬೇಕಾದರೆ ಯುವಜನತೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಹಕ್ಕುಗಳಿಗಾಗಿ ಹೋರಾಟಗಳನ್ನು ರೂಪಿಸುವ ಮೂಲಕ ಯುವಜನತೆ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕಾಲೇಜು ಘಟಕದ ನೂತನ ಅಧ್ಯಕ್ಷರಾಗಿ ಎಂ.ಶ್ರೀಹರಿ, ಉಪಾಧ್ಯಕ್ಷರಾಗಿ ಎನ್.ಶ್ರೀನಾಥ್, ಕೀರ್ತನ್, ಅಂಬರೀಶ್, ಕಾರ್ಯದರ್ಶಿಯಾಗಿ ಕಿರಣ್, ಸಹ ಕಾರ್ಯದರ್ಶಿಗಳಾಗಿ ರಾಹುಲ್, ಚಂದನ್, ಕಾಂಚನ, ಸುಮಂತ್ ಅವರನ್ನು ಆಯ್ಕೆ ಮಾಡಲಾಯಿತು.