ವಿದ್ಯಾರ್ಥಿಗಳು ಅನಗತ್ಯ ವಿಷಯಗಳತ್ತ ಗಮನಹರಿಸಬಾರದು. ಕಾರ್ಯತತ್ಪರತೆ ವಿದ್ಯಾರ್ಥಿಗಳ ಮೂಲಮಂತ್ರವಾಗಬೇಕು ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ವಿದ್ಯಾರ್ಥಿಗಳ ಯಶಸ್ಸಿಗೆ ಸೂತ್ರಗಳು ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯದ ಅರಿವಿರಬೇಕು. ಉತ್ತಮ ಪ್ರಯತ್ನವಿಲ್ಲದೆ ಒಳ್ಳೆಯ ಫಲಿತಾಂಶ ದೊರೆಯುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ನಿರಂತರವಾದ ಅಧ್ಯಯನ ಮಾಡಿ, ಮುಂಬರುವ ಪರೀಕ್ಷೆಗಳನ್ನು ಆತ್ಮವಿಶ್ವಾಸ ದಿಂದ ಎದುರಿಸಿ, ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಎಂದರು.
ಉಪನ್ಯಾಸದಲ್ಲಿ ಉದಾಹರಣೆ ಸಹಿತ ಹಲವಾರು ನಿದರ್ಶನಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು ಹಾಗೂ ವಿದ್ಯಾರ್ಥಿಗಳ ಓದಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ರೋಸಲೀನ್ ಪೆರೇರಾ ಮಾತನಾಡಿ, ವಿದ್ಯಾರ್ಥಿ ಜೀವನದ ಯಶಸ್ಸಿನ ಬಗ್ಗೆ ಉಪನ್ಯಾಸ ನೀಡಿರುವ ವಿಷಯವನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಿರಿ ಎಂದರು.
ಕುಂದಲಗುರ್ಕಿ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎಂ.ವೆಂಕಟೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಶಾಲೆಯ ಶಿಕ್ಷಕರಾದ ಟಿ.ಆರ್.ಗೀತಾಕುಮಾರಿ, ಸಿ.ಪ್ರಶಾಂತ್ ಕುಮಾರ್, ಕೆ.ಎಂ.ರಮೇಶ್ ಕುಮಾರ್, ಎಲ್.ವಿ.ವೆಂಕಟರೆಡ್ಡಿ, ವಿ.ಮಂಜುನಾಥ್, ಎಸ್.ಗುಂಡಪ್ಪ, ಹನುಮಪ್ಪ ಸೊಟಕ್ಕನವರ್, ಎಸ್. ವೆಂಕಟರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.