Sidlaghatta : ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದ ಶಾಸಕ ವಿ.ಮುನಿಯಪ್ಪ ನವರಿಗೆ ನನ್ನ ಜೀವವಿರುವವರೆಗೂ ಋಣಿಯಾಗಿರುತ್ತೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲ್ಲೂಕಿನ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘಕ್ಕೆ ಸೇರಿದ ಭಕ್ತರಹಳ್ಳಿ ಶಾಖೆಯ ನವೀಕರಿಸಿದ ಕಟ್ಟಡದ ಪೂಜಾ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದರು.
ನಾನು ಕ್ಷೇತ್ರದ ಶಾಸಕನಾಗಬೇಕು ಎಂದು ಬಯಸಿ ಬಂದವನಲ್ಲ. ಕ್ಷೇತ್ರದಲ್ಲಿ ಶಾಸಕ ವಿ.ಮುನಿಯಪ್ಪನವರೇ ಮುಂದುವರೆಯಬೇಕು ಎಂದು ಒತ್ತಾಯ ಮಾಡಿದವರಲ್ಲಿ ನಾನೂ ಸಹ ಒಬ್ಬ, ವಿ.ಮುನಿಯಪ್ಪನವರು ಅನಾರೋಗ್ಯ ಸಮಸ್ಯೆಯಿಂದ ಕ್ಷೇತ್ರದಿಂದ ಹೊರಗುಳಿಯಲು ಮುಂದಾದಾಗ ಅವರ ಪುತ್ರ ಎಂ. ಶಶಿಧರ್ ಬಳಿ ಖುದ್ದು ನಾನು ಹಾಗು ಸಾಸಕ ಮುನಿಯಪ್ಪ ತೆರಳಿ ಅಭ್ಯರ್ಥಿಯಾಗಬೇಕು ಎಂಬ ಮನವಿ ಮಾಡಿದಾಗ ತಮ್ಮದೇ ಆದ ಹಲವು ಕಾರಣಗಳಿಂದ ನಾನು ಸ್ಪರ್ಧಿಸಲು ಸಾಧ್ಯವಿಲ್ಲ ನಮ್ಮ ಬದಲಿಗೆ ನೀವೇ ಸ್ಪರ್ಧಿಸಿ ಎಂದು ಶಾಸಕ ವಿ.ಮುನಿಯಪ್ಪ ಸೇರಿದಂತೆ ಅವರ ಪುತ್ರ ಶಶಿಧರ್ ನನ್ನನ್ನು ಆಯ್ಕೆ ಮಾಡಿ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಇದು ನಾನು ಬಯಸದೇ ಬಂದಂತಹ ಭಾಗ್ಯ ಎಂದರು.
ಕಳೆದ ನಲವತ್ತು ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಆರು ಭಾರಿ ಕ್ಷೇತ್ರದ ಶಾಸಕರಾಗಿ ಕ್ಷೇತ್ರದಲ್ಲಿ ಅವರು ಗಳಿಸಿರುವ ಹೆಸರಿಗೆ ಚ್ಯುತಿ ಬಾರದಂತೆ ಹಾಗು ಕ್ಷೇತ್ರವನ್ನು ಕಟ್ಟಿ ಬೆಳೆಸುವುದು ನನ್ನ ಮುಖ್ಯ ದ್ಯೇಯ ಆಗಿದೆ. ಈಗಾಗಲೇ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಜನರ ಸೇವೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಮನೆ ಮಗನಾಗಿ ಸೇವೆ ಮಾಡಲು ಸಿದ್ದ ಎಂದರು.
ಶಾಸಕ ವಿ.ಮುನಿಯಪ್ಪ ನವರೊಂದಿಗೆ ಸೇರಿ ಕ್ಷೇತ್ರಧಾಧ್ಯಂತ ಮನೆ ಮನೆ ಭೇಟಿ ನೀಡುವುದು ಸೇರಿದಂತೆ ಮುಖಂಡರಲ್ಲಿರುವ ಬಿನ್ನಾಭಿಪ್ರಾಯ ಶಮನ ಮಾಡುವ ಕೆಲಸ ಮಾಡಲಾಗುವುದು. ಇನ್ನು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ನೆರೆಯ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ರನ್ನು ಖುದ್ದು ಹಾಗು ಮುಖಂಡರೊಂದಿಗೆ ಭೇಟಿ ಮಾಡಿ ತಮಗೆ ಸಹಕರಿಸುವಂತೆ ಮನವಿ ಮಾಡಲಾಗುವುದು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬ್ಯಾಲಹಳ್ಳಿ ಗೋವಿಂದಗೌಡರನ್ನು ಘೋಷಿಸಿರುವ ಘಟನೆ ಯಾರೊಬ್ಬರೂ ಊಹಿಸಿರಲಿಲ್ಲ, ಇದೊಂದು ಸ್ವಪ್ರೇರಣೆಯಿಂದ ಹುಟ್ಟಿದ ವೇಧಿಕೆಯಾಗಿದೆ. ಕ್ಷೇತ್ರದ ಒಳಿತು ಹಾಗು ಅಭಿವೃದ್ದಿಯ ವಿಚಾರದಲ್ಲಿ ಈಗಾಗಲೇ ಆಂತರಿಕ ಚರ್ಚೆ ನಡೆಸಿ ತೆಗೆದುಕೊಂಡ ತೀರ್ಮಾನ ಇದಾಗಿದೆ. ನಾಳೆಯಿಂದ ಕ್ಷೇತ್ರದ ವಿವಿದೆಡೆ ಸಂಚರಿಸಿ ಮುಖಂಡರ ಹಾಗು ಕಾರ್ಯಕರ್ತರ ಮುನಿಸು ಶಮನ ಮಾಡುವುದು ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎ.ನಾಗರಾಜ್, ಮಾಜಿ ತಾ.ಪಂ ಸದಸ್ಯ ರಾಜಣ್ಣ, ಮುಖಂಡರಾದ ಎನ್.ರಾಮಿರೆಡ್ಡಿ, ಮುತ್ತೂರು ಚಂದ್ರೇಗೌಡ, ಮೇಲೂರು ಮಂಜುನಾಥ್, ಮತ್ತಿತರರು ಹಾಜರಿದ್ದರು.