‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ. ಭಯ- ಸಂಶಯ- ತಲ್ಲಣಗಳ ಕಂದರಗಳು ತೆರೆದಿವೆ’ ಎಂದು ಬರೆದ ಶಿವರುದ್ರಪ್ಪನವರ ಕವಿ ನುಡಿಗಳನ್ನು ಅಳವಡಿಸಿಕೊಂಡಲ್ಲಿ ಎಲ್ಲರೂ ಒಗ್ಗೂಡಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಉಲ್ಲೂರುಪೇಟೆಯ ಶ್ರೀವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆದ ‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕುರಿತಂತೆ ಮಾತನಾಡಿದರು.
ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು. ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ. ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ ಎಂದು ಅರ್ಥಪೂರ್ಣವಾಗಿ ಬರೆದ ಜಿ.ಎಸ್.ಎಸ್ ಕವಿಯಾಗಿ ಪ್ರಸಿದ್ಧರು. ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತಗಾರರಾಗಿದ್ದರು. ಕುವೆಂಪು ಅವರ ಮೆಚ್ಚಿನ ಶಿಷ್ಯರಾಗಿ ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು ಎಂದು ವಿವರಿಸಿದರು.
ನಗರದ ಪ್ರತಿಯೊಂದು ವಾರ್ಡ್ನಲ್ಲೂ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾದ ಕನ್ನಡದ ಓದನ್ನು ಪ್ರೇರೇಪಿಸುವ ‘ಕವಿ ನಮನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯ ಕವಿನಮನವನ್ನು ಈ ಬಾರಿ 11ನೇ ವಾರ್ಡ್ನಲ್ಲಿ ನಡೆಸುತ್ತಿರುವುದಾಗಿ ಹೇಳಿದರು.
ಭಜನೆ ಕಲಾವಿದ ನಾಮದೇವ್ ಮಾತನಾಡಿ, ತಬಲಾ ಮತ್ತು ಹಾರ್ಮೋನಿಯಮ್ ಕಲಾವಿದರು ಮೊದಲು ಪ್ರತಿಯೊಂದು ಗ್ರಾಮಗಳಲ್ಲೂ ಇದ್ದರು. ಆದರೆ ಈಗವರು ವಿರಳವಾಗುತ್ತಿದ್ದಾರೆ. ಈ ಕಲೆಯನ್ನು ಉತ್ತೇಜಿಸುವ ಕೆಲಸ ಕ.ಸಾ.ಪ ಮಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಅನಂತರಾಮಯ್ಯ ಅವರನ್ನು ಕ.ಸಾ.ಪ ತಾಲ್ಲೂಕು ಘಟಕದಿಂದ ಗೌರವಿಸಲಾಯಿತು. ಅನಿಲ್ ಪದ್ಮಶಾಲಿ ಅವರು ಕ.ಸಾ.ಪ ತಾಲ್ಲೂಕು ಘಟಕಕ್ಕೆ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ನೀಡಲು ಮೂರು ಸಾವಿರ ರೂಗಳನ್ನು ನೀಡಿದರು.
ನಗರಸಭಾ ಸದಸ್ಯೆ ಸಂಧ್ಯಾ ಮಂಜುನಾಥ್, ಶಿಕ್ಷಕರಾದ ಅಮರನಾಥ್, ವಿ.ಕೃಷ್ಣ, ಕಲಾವಿದ ಲಕ್ಷ್ಮೀನಾರಾಯಣ, ಎಲ್.ಮಂಜುನಾಥ್ ಕವನ ವಾಚಿಸಿದರು.
ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ್, ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕೋಶಾಧ್ಯಕ್ಷ ಎಸ್.ಸತೀಶ್, ಲವಕುಮಾರ್, ಮಂಜುನಾಥ್, ಮನೋಜ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -