ಪ್ರತಿಯೊಂದು ಮನೆಯಲ್ಲೂ ಪುಟ್ಟ ಗ್ರಂಥಾಲಯವಿರಬೇಕು. ಇದರಿಂದ ಜ್ಞಾನಸಂಪಾದನೆ ಹಾಗೂ ನಮ್ಮ ಕ್ರಿಯಾಶೀಲತೆ ಹೆಚ್ಚಿಸಲು ನೆರವಾಗುತ್ತದೆ. ಸಾಹಿತ್ಯ ಓದುವ ಮೂಲಕ ಕನ್ನಡವನ್ನು ಬೆಳೆಸಬೇಕು ಎಂದು ಸಾಹಿತಿ ಕಾಗತಿ ವೆಂಕಟರತ್ನಂ ತಿಳಿಸಿದರು.
ನಗರದ ಗಂಗಮ್ಮ ದೇವಾಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆದ ‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಪ್ರತಿಯೊಂದು ವಾರ್ಡ್ ನಲ್ಲೂ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾದ ಕನ್ನಡದ ಓದನ್ನು ಪ್ರೇರೇಪಿಸುವ ‘ಕವಿ ನಮನ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕ.ಸಾ.ಪ ತಾಲ್ಲೂಕು ಘಟಕ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಈ ಬಾರಿಯ ಕವಿನಮನವನ್ನು ‘ಆಧುನಿಕ ಕನ್ನಡ ಸಣ್ಣಕತೆಗಳ ಜನಕ’ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಸಮರ್ಪಿಸಲಾಗಿದೆ. ಜನಸಾಮಾನ್ಯರ ಮತ್ತು ಅಸಾಮಾನ್ಯರ ಬದುಕಿನ ನೋವು-ನಲಿವುಗಳನ್ನು ಅವರು ತಮ್ಮ ಬರಹದಲ್ಲಿ ಸರಳ ಭಾಷೆಯಲ್ಲಿ ಚಿತ್ರಿಸಿದ್ದು ಪ್ರತಿಯೊಬ್ಬರೂ ಅವರ ಕಥೆಗಳನ್ನು ಓದುವ ಮೂಲಕ ಜೀವನೋತ್ಸಾಹವನ್ನು ಪಡೆದುಕೊಳ್ಳಬಹುದಾಗಿದೆ. ಮಾಸ್ತಿರವರ ೧೨೫ನೇ ಜಯಂತಿಯ ಸಂದರ್ಭದಲ್ಲಿ ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ಅವರನ್ನು ನೆನೆಯುವುದು ಸೂಕ್ತವಾಗಿದೆ. ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವವರನ್ನು ಸಮಾಜ ಯಾವಾಗಲೂ ನೆನೆಯುತ್ತದೆ, ಅಂತಹ ವ್ಯಕ್ತಿತ್ವ ಹೊಂದಿದ್ದ ಮಾಸ್ತಿಯವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.
ಎಸ್.ವಿ.ನಾಗರಾಜರಾವ್ ಹೆಣ್ಣಿನಬಗ್ಗೆ, ಚಂದ್ರಶೇಖರ್ ಹಡಪದ್ ಕಾವೇರಿ ಮತ್ತು ಗೂಳಿ ಕುರಿತು, ಗೋಳುಚಿನ್ನಪ್ಪನಹಳ್ಳಿ ವೆಂಕಟೇಶ್ ಹೆಣ್ಣಿನ ಶೋಷಣೆ ಬಗ್ಗೆ, ಕಾಶೀನಾಥ್ ಸ್ನೇಹದ ಕುರಿತಂತೆ ಕವನಗಳನ್ನು ವಾಚಿಸಿದರು. ಶ್ರೀಕಾಂತ್ ಮತ್ತು ಸಾವಿತ್ರಮ್ಮ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಶ್ರೀಕಾಂತ್ ಅವರನ್ನು ಕ.ಸಾ.ಪ ತಾಲ್ಲೂಕು ಘಟಕದಿಂದ ಗೌರವಿಸಲಾಯಿತು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭಾ ಸದಸ್ಯೆ ಸುಗುಣ ಲಕ್ಷ್ಮೀನಾರಾಯಣ್, ಕ.ಸಾ.ಪ ತಾಲ್ಲೂಕು ಘಟಕದ ಮಹಿಳಾ ಪ್ರತಿನಿಧಿ ಸಾವಿತ್ರಮ್ಮ, ಉಪಾಧ್ಯಕ್ಷ ಸಿ.ಪಿ.ಈ ಕರಗಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಎಂ.ಮುನಿಯಪ್ಪ, ಸಹ ಸಂಚಾಲಕ ಕಾಶೀನಾಥ್, ನಗರಸಭಾ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್, ಎಸ್.ವಿ.ನಾಗರಾಜರಾವ್, ಶಾಲಿನಿ, ಎ.ಎಸ್. ರವಿ, ಗುರು, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -