ಶಿಶುನಾಳ ಶರೀಫರ ‘ನಾನಾರಿಗಲ್ಲಾದವಳು, ಬಿದಿರು ನಾನಾರಿಗಲ್ಲಾದವಳು’ ಹಾಡಿಗೆ ವಿದ್ಯಾರ್ಥಿಗಳು ದನಿಯಾದರು. ತಮ್ಮ ಪಾಠದಲ್ಲಿರುವ ಪದ್ಯ ರಾಗವಾಗಿ, ಇಂಪಾಗಿ ಕೇಳಿದಾಗ ಅವರೂ ರಾಗವಾಗಿ ದನಿಗೂಡಿಸಿದರು.
ನಗರದ ದಿ ಕ್ರೆಸೆಂಟ್ ಶಾಲೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ‘ಕವಿಯ ನೆನೆದು – ಕವಿತೆ ಕೇಳಿ’ ಎಂಬ ಕನ್ನಡದ ಹೆಸರಾಂತ ಕವಿಗಳ ಮತ್ತು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಜಾನಪದ ಸಂಶೋಧಕ ಡಾ.ಕೆ.ರವಿಕುಮಾರ್ ಹಾಡುತ್ತಿದ್ದರೆ ವಿದ್ಯಾರ್ಥಿಗಳು ಜೊತೆಯಲ್ಲಿ ಹಾಡಿ ಆನಂದಿಸಿದರು.
ರಾಷ್ಟ್ರಕವಿ ಕುವೆಂಪು ರಚಿಸಿರುವ ‘ಬಾರಿಸು ಕನ್ನಡ ಡಿಂಡಿಮವ’, ‘ಓ ನನ್ನ ಚೇತನಾ’; ವರಕವಿ ಬೇಂದ್ರೆ ರಚನೆಯ ‘ಶ್ರಾವಣ ಬಂದು ನಾಡಿಗೆ’, ‘ಕುರುಡು ಕಾಂಚಾಣ’; ರಾಷ್ಟ್ರಕವಿ ಜಿ.ಎಸ್.ಎಸ್ ರಚನೆಯ ‘ಎಲ್ಲೋ ಹುಡುಕಿದೆ’, ‘ಆಕಾಶದ ನೀಲಿಯಲ್ಲಿ’; ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ರಚಿಸಿರುವ ‘ಬಳೆಗಾರ ಚನ್ನಯ್ಯ’, ‘ಕಿಟಕಿಯ ಬಾಗಿಲು’; ನಿತ್ಯೋತ್ಸವ ಕವಿ ಪ್ರೋ.ಕೆ.ಎಸ್.ನಿಸಾರ್ ಅಹಮದ್ ಅವರು ರಚಿಸಿರುವ ‘ನಿತ್ಯೋತ್ಸವ’, ‘ಕುರಿಗಳು ಸರ್ ಕುರಿಗಳು’ ಸೇರಿದಂತೆ ಹಲವು ಜಾನಪದ ಗೀತೆಗಳನ್ನು ಹಾಡಲಾಯಿತು. ತಬಲಾ ಕಲಾವಿದ ಮುನಿವೆಂಕಟಪ್ಪ, ಹಾರ್ಮೋನಿಯಂ ಕಲಾವಿದ ಕೇಶವಪ್ಪ ಸಾಥ್ ನೀಡಿದರು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕವಿಗಳ ಪರಿಚಯವನ್ನು ಮಾಡಿಕೊಟ್ಟರು.
ದಿ ಕ್ರೆಸೆಂಟ್ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಯೂಸುಫ್, ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ, ಕ.ಸಾ.ಪ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಮೃತಕುಮಾರ್, ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ಜಾನಪದ ಗಾಯಕ ದೇವರಮಳ್ಳೂರು ಮಹೇಶ್, ಮಂಜುನಾಥ್, ದೇವರಾಜ್, ಆರ್.ಕೃಷ್ಣಪ್ಪ, ಶಾಲಾ ಶಿಕ್ಷಕರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -