ತಾಲ್ಲೂಕಿನ ಸಾದಲಿ ಹೋಬಳಿಯ ಸಾದಲಿ, ಕೋಟಗಲ್, ಕಾಮನಹಳ್ಳಿ ಮತ್ತು ಬಂದಾರ್ಲಹಳ್ಳಿ ಗ್ರಾಮಸ್ಥರು ಗ್ರಾಮದ ಬಳಿ ಕಲ್ಲುಗಣಿಗಾರಿಕೆಗೆ ಅವಕಾಶಕೊಡಬಾರದೆಂದು ಸೋಮವಾರ ತಾಲ್ಲೂಕು ಕಚೇರಿಯ ಮುಂದೆ ಧರಣಿಯನ್ನು ನಡೆಸಿದರು.
ಸಾದಲಿ ಗ್ರಾಮದ ಸರ್ವೆ ನಂಬರ್ 72, ಕೋಟಗಲ್ ಗ್ರಾಮದ ಸರ್ವೆ ನಂಬರ್ 39 ರ ಗೋಮಾಳದಲ್ಲಿ ಹಲವಾರು ಮಂದಿ ಕಲ್ಲು ಪುಡಿ ಮಾಡುವ ಯಂತ್ರಗಳನ್ನು ಜೋಡಿಸಲು ಇಲಾಖೆಯಿಂದ ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ರೈತರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅವರ ಗುತ್ತಿಗೆ ಅರ್ಜಿಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
ಸಾದಲಿ ಗ್ರಾಮದ ಸರ್ವೆ ನಂಬರ್ 72ರ ಗೋಮಾಳದ ಜಮೀನಿನಲ್ಲಿ ಬಂಡೆಯಿದ್ದು, ಬಂಡೆಯ ಮೇಲ್ಭಾಗದಲ್ಲಿ ಅತಿ ಪುರಾತನ ಕಾಲದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವಿದೆ. ಇದನ್ನು ರೂಢಿ ನಾಮದಂತೆ ದೇವರಗುಡಿ ಬೆಟ್ಟವೆಂದು ಕರೆಯುತ್ತಾರೆ. ಸುತ್ತಮುತ್ತ ಜಮೀನುಗಳಿದ್ದು, ರೈತರು ಕೊಳವೆ ಬಾವಿಗಳನ್ನು ಕೊರೆಸಿ ಬೆಳೆ ಬೆಳೆಯುತ್ತಿದ್ದಾರೆ. ಈ ಬೆಟ್ಟದ ತಪ್ಪಲಿನಲ್ಲಿ ಮೂರ್ನಾಕು ಕೆರೆಗಳಿವೆ. ರಾಜ್ಯ ಹೆದ್ದಾರಿ ಸುಮಾರು 100 ಮೀಟರ್ ಪಕ್ಕದಲ್ಲಿದೆ ಮತ್ತು ವಿದ್ಯುತ್ ಇಲಾಖೆಯವರು ಇದೇ ಸ್ಥಳದಲ್ಲಿ 66 ಕೆ.ವಿ. ವಿದ್ಯುತ್ ಲೈನ್ ಅಳವಡಿಸಿದ್ದಾರೆ.
ಕೋಟಗಲ್ ಗ್ರಾಮದ ಸರ್ವೆ ನಂಬರ್ 39 ಗೋಮಾಳದ ಜಮೀನಿನ ಬಳಿ ಕೋಟಗಲ್, ಕಾಮನಹಳ್ಳಿ ಮತ್ತು ಬಂದಾರ್ಲಹಳ್ಳಿಗೆ ಹೋಗುವ ರಸ್ತೆಯಿದೆ. ಬೆಟ್ದ ತಪ್ಪಲಲ್ಲಿ ಸಪ್ತ ಮಾತೆಯರ ಮತ್ತು ಮುನೇಶ್ವರ ದೇವಸ್ಥಾನವಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಸರ್ಕಾರ ಈ ಸ್ಥಳದಲ್ಲಿ ಸಮುದಾಯಭವನ ಕೊಳವೆ ಬಾವಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ.
ಈ ಗೋಮಾಳದ ಜಮೀನುಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಸು, ಎಮ್ಮೆ, ಕುರಿ, ಮೇಕೆಗಳನ್ನು ಮೇಯಿಸುತ್ತಾರೆ. ಹತ್ತಿರದಲ್ಲಿ ಅರಣ್ಯಪ್ರದೇಶವಿದೆ. ಇಲ್ಲಿ ಗಣಿಗಾರಿಕೆ ನಡೆದಲ್ಲಿ ಕ್ರಷರ್ಗಳನ್ನು ಜೋಡಿಸಿದಲ್ಲಿ ಕಲ್ಲು ಪುಡಿ ಧೂಳಿನಿಂದ ಬೆಳೆಗಳು ಹಾನಿಯಾಗುತ್ತವೆ. ಆರೋಗ್ಯ ಹದಗೆಡುತ್ತದೆ. ದೇವಸ್ಥಾನಕ್ಕೆ ಧಕ್ಕೆಯಾಗುತ್ತದೆ. ಅಂತರ್ಜಲ ಕುಸಿಯುತ್ತದೆ. ಕೆರೆಗಳು, ರಸ್ತೆ, ವಿದ್ಯುತ್ ತಂತಿ ಹಾಳಾಗುತ್ತದೆ. ಜಾನುವಾರುಗಳಿಗೆ ಆಹಾರವಿಲ್ಲದಾಗುತ್ತದೆ. ಈ ಸ್ಥಳದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಲ್ಲಿಸಿದರು. ಕೋಟಗಲ್ ರೆಡ್ಡಪ್ಪ, ಕೆ.ಎಂ.ಮಂಜುನಾಥ್, ಕೆ.ಎನ್.ನಾಗಿರೆಡ್ಡಿ, ಕಾಮನಹಳ್ಳಿ ನರಸಿಂಹಪ್ಪ, ಪಾರ್ವತಮ್ಮ, ಲಕ್ಷ್ಮೀದೇವಮ್ಮ, ಬೊಮ್ಮನ್ನ, ಶ್ರೀನಿವಾಸರೆಡ್ಡಿ, ಗಂಗಿರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -
- Advertisement -