ದೇಶಿಯ ಕಲಾಕೃತಿಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಕಲೆಯು ಈಗ ಕೇವಲ ಹವ್ಯಾಸವಾಗಿ ಉಳಿದಿಲ್ಲ. ಕಲೆಯನ್ನು ಪ್ರವೃತ್ತಿಯಿಂದ ವೃತ್ತಿಯನ್ನಾಗಿಸಿಕೊಳ್ಳಬಹುದು. ಅದಕ್ಕೆ ನಿರಂತರ ಸಾಧನೆ ಮಾಡಬೇಕು. ತನ್ಮೂಲಕ ಸ್ವಾವಲಂಬಿಗಳಾಗಬಹುದು ಶಾಸಕ ಎಂ. ರಾಜಣ್ಣ ತಿಳಿಸಿದರು.
ನಗರದ ಗೌಡರ ಬೀದಿಯ ದಾಸಪ್ಪನವರ ಪಾರ್ಥಸಾರಥಿ ಅವರ ಮನೆಯಲ್ಲಿ ಭಾನುವಾರ ಕ.ಸಾ.ಪ ತಾಲ್ಲೂಕು ಘಟಕದಿಂದ ನಡೆದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣಪತ್ರ ಹಾಗೂ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ನಮ್ಮಲ್ಲಿ ಎಲೆಮರೆಯ ಕಾಯಿಗಳಂತೆ ಹಲವಾರು ಮಂದಿ ಕಲಾವಿದರಿದ್ದಾರೆ. ನಾವು ಪ್ರಯೋಜನಬಾರದೇ ಬಿಸಾಡುವ ವಸ್ತು ಕೂಡ ಉಪಯೋಗವಾಗುವಂತೆ ಮಾಡುವುದು ವಿಶಿಷ್ಟ ಕಲೆಯಾಗಿದೆ. ಈ ರೀತಿಯ ಕಲಾಕಾರರನ್ನು ತಾಲ್ಲೂಕು ಕಸಾಪ ಗುರುತಿಸಿ ಅವರ ಮೂಲಕ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ,‘ಕಳೆದ ಜೂನ್ ತಿಂಗಳಿನಲ್ಲಿ ತಾಲ್ಲೂಕು ಘಟಕದಿಂದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯ ಶಿಬಿರವನ್ನು ಪ್ರಾರಂಭಿಸಲಾಗಿತ್ತು. ಶಿಬಿರವು ಹನ್ನೆರಡು ವಾರಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರದಂದು ಸಂಜೆ 4 ರಿಂದ 6 ಗಂಟೆಯವರೆಗೂ ನಡೆದಿದೆ, ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್ ಅವರು ತ್ಯಾಜ್ಯ ಎಂದು ಬಿಸಾಡುವ ತೆಂಗಿನ ಚಿಪ್ಪು, ರದ್ದಿ ಕಾಗದ, ಐಸ್ಕ್ರೀಮ್ ಚಮಚ, ಹತ್ತಿ ಮುಂತಾದ ಹಲವು ವಸ್ತುಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ತಯಾರಿಸುವ ಬಗ್ಗೆ ಆಸಕ್ತ 25 ಮಂದಿ ಮಕ್ಕಳಿಗೆ ಉಚಿತವಾಗಿ ಕಲಿಸಿದ್ದರು. ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಮತ್ತು ಕರಕುಶಲ ಕಲೆಯನ್ನು ಕಲಿಯುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಬುದ್ಧಿ ಚುರುಕಾಗುತ್ತದೆ ಮತ್ತು ಜೀವನೋತ್ಸಾಹ ಮೂಡುತ್ತದೆ. ಮಕ್ಕಳಿಗೆ ಉಪಯುಕ್ತ ಕಲೆಯನ್ನು ಕಲಿಸುವುದೂ ಕನ್ನಡದ ಕೆಲಸವೆಂದೇ ತಾಲ್ಲೂಕು ಕಸಾಪ ವತಿಯಿಂದ ಈ ಶಿಬಿರವನ್ನು ಉಚಿತವಾಗಿ ನಡೆಸಲಾಗಿತ್ತು’ ಎಂದು ಹೇಳಿದರು.
ಶಿಬಿರದಲ್ಲಿ ಕಲಿತ ಮಕ್ಕಳಲ್ಲಿ ಉತ್ತಮ ಕಲಾಕೃತಿಗಳನ್ನು ತಯಾರಿಸಿದ ಹರ್ಷಿತಾ ಮತ್ತು ಯಾಮಿನಿಗೆ ಪ್ರಥಮ ಸ್ಥಾನ, ಭೂಮಿಕಾ ಮತ್ತು ಪಾವನಿಗೆ ದ್ವಿತೀಯ ಸ್ಥಾನ, ಶ್ರೇಯಸಿಗೆ ತೃತೀಯ ಸ್ಥಾನವನ್ನು ನೀಡಿ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಎಲ್ಲಾ ಶಿಬಿರಾರ್ಥಿಗಳಿಗೂ ಪ್ರಮಾಣಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್, ರೂಪ ಪಾರ್ಥಸಾರಥಿ, ಮಂಜುನಾಥ್, ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜು, ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಸದಸ್ಯರಾದ ಮಂಜುನಾಥ್, ಮಾಲತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.