ಸಾಹಿತ್ಯವು ಜೀವನಾನುಭವದ ಕಲಾತ್ಮಕ ಅಭಿವ್ಯಕ್ತಿಯಾಗಿದೆ. ಸಾಹಿತ್ಯದಿಂದ ಸಮಾಜದ ಬದಲಾವಣೆ ಸಾಧ್ಯವಿದೆ. ಕನ್ನಡ ಭಾಷೆಯ ಪದಬಳಕೆಯು ಹೆಚ್ಚಾದಷ್ಟೂ ಭಾಷೆ ಬೆಳೆಯುತ್ತದೆ ಉಳಿಯುತ್ತದೆ ಎಂದು ಕನ್ನಡ ಉಪನ್ಯಾಸಕ ಎನ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೇಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ವಿವಿಧ ಜಾತಿ ಮತ್ತು ಧರ್ಮ ಆಧಾರಿತ ಸಮಾಜವಿರುವ ನಮ್ಮ ರಾಜ್ಯದಲ್ಲಿ ಜನರನ್ನು ಒಗ್ಗೂಡಿಸಿರುವುದು ನಮ್ಮ ಕನ್ನಡ ಭಾಷೆ. ಮಾತೃಭಾಷೆಯಿಂದ ಮಾತ್ರ ನೋವು, ನಲಿವು, ಕಷ್ಟ, ಸುಖ ಮುಂತಾದ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯ. ಇಪ್ಪತ್ತು ಶತಮಾನಗಳ ಹಿಂದಿನ ಸಂಪತ್ಭರಿತ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗಳಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಹೇಳಿದರು.
ಭಾಷೆಯನ್ನು ಗೌರವಿಸಬೇಕು, ಪ್ರೀತಿಸಬೇಕು. ಬದುಕಿನ ಭಾಷೆಯಾದ ಕನ್ನಡವನ್ನು ಪ್ರೀತಿಸುತ್ತಲೇ ವ್ಯವಹಾರಕ್ಕಾಗಿ ಇತರ ಭಾಷೆಗಳನ್ನೂ ಕಲಿಯಬಹುದು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮತ್ತು ತಮ್ಮ ಭಾವನೆಗಳನ್ನು, ಅನುಭವವನ್ನು ಬರೆದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ತಾಲ್ಲೂಕಿನ 101 ಶಾಲೆಗಳಲ್ಲಿ ‘ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಆವರಣದಲ್ಲಿ 20 ಸಸಿಗಳನ್ನು ನೆಡುವ ಮೂಲಕ ಮಾಡಲಾಯಿತು. ‘ಕನ್ನಡ ಭಾಷೆ ಮತ್ತು ವ್ಯಕ್ತಿ ಪರಿಚಯ’ ವಿಷಯದ ಬಗ್ಗೆ ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಲ್ಪ, ಎಂ.ಭಾವನಾ ಮತ್ತು ಕೆ.ಎಸ್.ಭಾವನಾ ಅವರಿಗೆ ಹಾಗೂ ‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಕಲ್ಯಾಣ್, ಶಿಲ್ಪ ಮತ್ತು ಸಹನಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಕ.ಸಾ.ಪ ಕಾರ್ಯಕ್ರಮಗಳಿಗೆ ಪ್ರಮಾಣ ಪತ್ರಗಳು ಮತ್ತು ಪುಸ್ತಕ ದಾನಿ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮತ್ತು ಸಂಪನ್ಮೂಲ ವ್ಯಕ್ತಿ ಎನ್.ಚಂದ್ರಶೇಖರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಮುಖ್ಯ ಶಿಕ್ಷಕಿ ಮಂಗಳಗೌರಮ್ಮ, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಉಪಾಧ್ಯಕ್ಷ ನಂದೀಶ್, ಸಂಚಾಲಕರಾದ ಸುಧೀರ್, ಸುದರ್ಶನ್, ಎಚ್.ಎಂ.ರಾಘವೇಂದ್ರ, ಎಸ್.ಡಿ.ಎಂ.ಸಿ ಸದಸ್ಯರಾದ ಮಂಜುಳ, ಬಿ.ಎನ್.ಗಂಗಾಧರಪ್ಪ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಧರ್ಮೇಂದ್ರ, ವಿ.ರಾಮಾಂಜನೇಯ, ಪ್ರಸಾದ್, ಸಹಶಿಕ್ಷಕರಾದ ಶಿವಕುಮಾರ್, ಪೊನ್ನಮ್ಮ, ವಿದ್ಯಾ, ಸವಿತಾ, ಸುಜಾತ, ಗಾಯತ್ರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -