ಗ್ರಾಮೀಣ ಭಾಗದ ಪ್ರತಿಭೆಗಳನ್ನು ಬೆಳೆಸಿ ಪೋಷಿಸಲು ಕಲಾಸಂಗಮದಂತಹ ಕಾರ್ಯಕ್ರಮಗಳು ಬಹಳ ಪ್ರಯೋಜನಕಾರಿಯಾಗಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ತಿಳಿಸಿದರು.
ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದ ರತ್ನಾವಳಿ ನಾಟ್ಯ, ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಎಚ್.ಕ್ರಾಸ್ನ ವಾಗ್ದೇವಿ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆಯ ವ್ಯಾಮೋಹಕ್ಕೊಳಗಾಗಿ ನಮ್ಮ ಪುರಾತನ ಕಲೆಗಳು ನಶಿಸುತ್ತಿರುವುದು ವಿಷಾಧಕರವಾಗಿದ್ದು, ಕಲೆಗಳನ್ನು ಉಳಿಸಿಬೆಳೆಸುವಲ್ಲಿ ಯುವಕರ ಪಾತ್ರ ಪ್ರಮುಖವಾದುದು ಎಂದರು.
ವಾಗ್ದೇವಿ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ವಿ.ರಾಜಣ್ಣ ಮಾತನಾಡಿ, ಜನಪದ ಕಲೆಗಳು ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿದ್ದು, ಇಂತಹ ಕಲೆಯ ಪ್ರಕಾರಗಳು ಆಸಕ್ತಿಯ ಕೊರತೆಯಿಂದಾಗಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಜಾನಪದ ಕಲಾಪ್ರಕಾರಗಳು ಜನರ ನಡುವೆ ಉತ್ತಮ ಬಾಂಧವ್ಯವವನ್ನು ಕಾಪಾಡುವುದಲ್ಲದೆ ಸ್ವಾಸ್ಥ್ಯ ಹಾಗೂ ಸದೃಢ ಸಮಾಜವನ್ನು ಬಿಂಬಿಸುತ್ತದೆ. ಹೀಗಾಗಿ ಜಾನಪದ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೀರಗಾಸೆ, ತಮಟೆವಾದನ, ಕೋಲಾಟ ಪ್ರದರ್ಶನ, ರಂಗಗೀತೆಗಳ ಗಾಯನ, ಜಾನಪದ ನೃತ್ಯ, ಜಾನಪದ ಗೀತೆಗಳ ಗಾಯನ, ಸಾಮಾಜಿಕ ನಾಟಕ ಪ್ರದರ್ಶನಗಳು ನಡೆದವು.
ಕಲಾವಿದರಾದ ಕೆ.ಎ.ರಾಜಪ್ಪ, ಮುನಿನಾರಾಯಣ, ಲಲಿತ, ಸಿ.ಆಂಜಿನಪ್ಪ, ಕೆ.ಎ.ರಾಜಪ್ಪ, ಸ್ವಾಮಿ ವಿವೇಕಾನಂದ, ಎಂ.ಚೇತನ್, ನಾರಾಯಣಮ್ಮ, ಕೆ.ಎ.ಸುನಂದ, ಯಶೋಧ, ಗಾಯಿತ್ರಿ, ವೆಂಕಟರಮಣಪ್ಪ, ರಾಮಕೃಷ್ಣಪ್ಪ ಮತ್ತಿತರರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
- Advertisement -
- Advertisement -
- Advertisement -