ಜಾನಪದ ನೃತ್ಯ ಪ್ರಕಾರದಲ್ಲಿ ಒಂದಾದ ಕಳಸನೃತ್ಯದ ಮೂಲಕ ದೇಶದೆಲ್ಲೆಡೆ ತಾಲ್ಲೂಕಿನ ಕೀರ್ತಿಯನ್ನು ಮೆರೆಸಿದ ದೇವರಮಳ್ಳೂರು ಗ್ರಾಮದಲ್ಲಿ ಜಾನಪದ ಜನಪರ ಉತ್ಸವ ನಡೆಯುತ್ತಿರುವುದು ಸಮಂಜಸವಾಗಿದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಂಗಳವಾರ ಮಳ್ಳೂರಾಂಭ ದೇವಿಯ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ನಡೆದ ಜನಪರ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸರ್ಕಾರ ಈ ಕಾರ್ಯಕ್ರಮವನ್ನು ನಡೆಸುತ್ತಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಜನಪದ ಕಲೆ ಉಳಿವಿಗಾಗಿ ಕಲಾವಿದರ ರಕ್ಷಣೆ ಆಗಬೇಕಿದೆ. ಈ ಪರಂಪರೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಸಂಸ್ಕೃತಿ ಉಳಿದರೆ ಪರಂಪರೆ ಉಳಿಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಗಡಿಭಾಗದಲ್ಲಿ ಜನಪದ ಕಾರ್ಯಕ್ರಮಗಳನ್ನು ಮಾಡುವಾಗ ಗ್ರಾಮೀಣ ಜನರು ತೋರಿಸುವ ಪ್ರೀತಿ ಮೆಚ್ಚುವಂತದ್ದು ಎಂದು ಹೇಳಿದರು.
ಜಾನಪದ ಹಾಡುಗಾರಿಕೆ, ತಮಟೆ ವಾದನ, ವೀರಗಾಸೆ, ಶಾಸ್ತ್ರೀಯ ನೃತ್ಯ, ಕರಗ ನೃತ್ಯ, ಡೊಳ್ಳು ಕುಣಿತ, ಬುರ್ರಕಥ, ಗೊರವರಕುಣಿತ ಸೇರಿದಂತೆ 31 ಕಲಾತಂಡಗಳು ಪ್ರದರ್ಶನವನ್ನು ನೀಡಿದವು. ಭಾಗವಹಿಸಿದ್ದ ಕಲಾವಿದರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು.
ಶಿರಸ್ತೆದಾರ್ ವಾಸುದೇವಮೂರ್ತಿ. ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಿ.ಎ.ಮಳ್ಳೂರಯ್ಯ, ರೆಡ್ಡಿಸ್ವಾಮಿ, ಆಂಜನೇಯರೆಡ್ಡಿ, ಚಲಪತಿ, ನಾರಾಯಣಪ್ಪ, ಎ.ವೆಂಕೋಬರಾವ್, ಕೆಂಪಣ್ಣ, ಗೋವಿಂದರಾಜು, ದ್ಯಾವಪ್ಪ, ಗೊಲ್ಲಹಳ್ಳಿ ಶಿವಪ್ರಸಾದ್, ಮೂಡಲಗೊಳ್ಳಹಳ್ಳಿ ನರಸಿಂಹಪ್ಪ, ದೇವರಮಳ್ಳೂರು ಮಹೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -