ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕಿನ ವಿವಿದೆಡೆ ಈಚೆಗೆ ಕಲಾತಂಡಗಳ ಮೂಲಕ ಎಚ್.ಐ.ವಿ ಮತ್ತು ಏಡ್ಸ್ ಕುರಿತಂತೆ ಜಾಗೃತಿ ಮೂಡಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ವೀರಭದ್ರೇಶ್ವರ ವೀರಗಾಸೆ ಕಲಾತಂಡದ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ 2009 ರಿಂದ 2014 ಅಕ್ಟೋಬರ್ ವರೆಗೆ 334 ಎಚ್.ಐ.ವಿ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ 15 ವರ್ಷದಿಂದ 29 ವರ್ಷದ ವಯೋಮಾನದವರು ಈ ರೋಗಕ್ಕೆ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ. ಯುವಪೀಳಿಗೆಗೆ ಏಡ್ಸ್ ಕುರಿತಂತೆ ಜಾಗೃತಿ ಮೂಡಿಸುವುದು ಅತಿ ಮುಖ್ಯವಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐ.ಸಿ.ಟಿ.ಸಿ ಕೇಂದ್ರದ ಆಪ್ತಸಮಾಲೋಚಕ ಎನ್.ಗಂಗಾಧರಯ್ಯ ಎಚ್.ಐ.ವಿ/ಏಡ್ಸ್ ನ ಬಗ್ಗೆ, ಹರಡುವ ವಿಧಾನ ಮತ್ತು ತಡೆಗಟ್ಟುವ ಬಗ್ಗೆ ತಿಳಿಸಿದರು.
ಆರೋಗ್ಯ ಸಿಬ್ಬಂದಿ, ಸೌಖ್ಯ ಸಂಜೀವಿನಿ ಸಂಸ್ಥೆ, ಮೈರಾಡ ಸಂಸ್ಥೆ ಸಿಬ್ಬಂದಿ, ದಿಬ್ಬೂರಹಳ್ಳಿ ಪ್ರಾಥಮಿಕ ಕೇಂದ್ರದ ಡಾ.ಮುನಿಸ್ವಾಮಿರೆಡ್ಡಿ, ಐ.ಸಿ.ಟಿ.ಸಿ ಕೇಂದ್ರದ ಆಪ್ತಸಮಾಲೋಚಕ ಎಂ.ಯತೀಶ್ ಮತ್ತಿತರರು ಹಾಜರಿದ್ದರು.