ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ದೇವರಾಜ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಳೆದ 25 ವರ್ಷಗಳಿಂದ ಹೊಸ ಬಗೆಯ ಶಿಕ್ಷಣದ ಕೈಂಕರ್ಯವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವ ಇವರು ಸ್ವಗ್ರಾಮ ಕಾಚಹಳ್ಳಿಯಾದರೂ ತಾಲ್ಲೂಕಿನಾದ್ಯಂತ ಕನ್ನಮಂಗಲ ದೇವರಾಜ್ ಎಂದೇ ಹೆಸರಾಗಿದ್ದಾರೆ. ಸುಮಾರು 20 ವರ್ಷಗಳ ಕಾಲ ತಮ್ಮ ಕರ್ಮಭೂಮಿಯಂತೆ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.
ಶಾಲೆಯಲ್ಲಿ ಗಮನವಿಟ್ಟು ಕಲಿಯದ, ಹೋಮ್ ವರ್ಕ್ ಮಾಡಿಕೊಂಡು ಬರದ, ಪರೀಕ್ಷೆಯಲ್ಲಿ ಸಾಕಷ್ಟು ಅಂಕ ಗಳಿಸದ ವಿದ್ಯಾರ್ಥಿಗೂ ಕ್ರಿಯಾಶೀಲತೆಯಿಂದ ಅವರಿಂದಲೂ ಸಂವೇದನಾಶೀಲ ಆಪ್ತ ಬರಹಗಳನ್ನು ಬರೆಸಿದರು. ತಮ್ಮ ಪರಿಸರದಲ್ಲಿ ಕಂಡುದರ ಬಗ್ಗೆ ಮಕ್ಕಳು ಬರೆಯತೊಡಗಿದರು. ಈಗಲೂ ಬರೆಯುತ್ತಲೇ ಇದ್ದಾರೆ.
ಎಂ.ದೇವರಾಜ್ ಅವರು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಕೆಲಸ ಮಾಡಿದರು. ಕನ್ನಮಂಗಲಕ್ಕೆ ಪತ್ರಿಕೆಗಳು ಬರುವುದಿಲ್ಲ. ತಮ್ಮ ಮನೆಗೆ ತರಿಸುವ ‘ಪ್ರಜಾವಾಣಿ’ ಪತ್ರಿಕೆಯನ್ನೇ ಶಾಲೆಗೆ ತೆಗೆದುಕೊಂಡು ಹೋಗಿ ಮಕ್ಕಳಿಗೆ ಓದಲು ಕೊಡುತ್ತಿದ್ದರು. ಮುಖಪುಟದ ಮುಖ್ಯಸುದ್ದಿಗಳು ಮಾತ್ರವಲ್ಲದೇ ಅಂಕಣಗಳು, ಸುಭಾಷಿತ, ಕರುಣಾಳು ಬಾ ಬೆಳಕೆ, ಸಾಪ್ತಾಹಿಕ ಪುರವಣಿಯಲ್ಲಿನ ಮಕ್ಕಳ ಪುಟ, ಕರ್ನಾಟಕ ದರ್ಶನ, ಕ್ರೀಡೆ, ಶಿಕ್ಷಣ ಪುರವಣಿಯ ಲೇಖನಗಳನ್ನೆಲ್ಲ ಕತ್ತರಿಸಿ ಪುಸ್ತಕ ರೂಪದಲ್ಲಿ ತಯಾರಿಸಿದ್ದಾರೆ. ಹೊರಗಿನ ಜಗತ್ತಿಗೆ ಮಕ್ಕಳು ತೆರೆದುಕೊಳ್ಳುವ ದಾರಿಯಂತೆ ಪತ್ರಿಕೆಯ ಲೇಖನಗಳನ್ನು ಬಳಸಿಕೊಂಡಿರುವರು. ಈ ಸಂಗ್ರಹವನ್ನು ಹಲವೆಡೆ ಪ್ರದರ್ಶನ ಕೂಡ ಮಾಡಿದ್ದಾರೆ.
ಮಕ್ಕಳಿಗೆ ಸ್ವರಚಿತ ನಾಟಕಗಳನ್ನು ಕಲಿಸಿ, ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಲಿಕೆಗೆ ಪೂರಕವಾದ ಹಲವಾರು ಕಲಿಕೋಪಕರಣಗಳನ್ನು ತಯಾರಿಸಿದ್ದಾರೆ. ಶಾಲೆ ಮತ್ತು ಇಲಾಖೆಯ ವತಿಯಿಂದ ವಿವಿಧ ಸಭೆ-ಸಮಾರಂಭಗಳಿಗೆ ವಿಶೇಷ ರೀತಿಯಲ್ಲಿ ವೇದಿಕೆ ಹಾಗೂ ಉದ್ಘಾಟನಾ ಜ್ಯೋತಿಯನ್ನು ಸಿದ್ಧಗೊಳಿಸುವರು.
ಇವರಿಗೆ ೨೦೦೧–-೦೨ ನೇ ಸಾಲಿನಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆ ನೀಡಿ ಗೌರವಿಸಿದೆ. ೨೦೦೩–-೨೦೦೪ ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಲಾಗಿದೆ.
ಕನ್ನಮಂಗಲ ಸರ್ಕಾರಿ ಶಾಲೆಯು ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಣಗೊಂಡಾದ ನಂತರ ಇಲಾಖೆ ಮತ್ತು ವಿವಿಧ ಮೂಲಗಳಿಂದ ೨೦೦೦ ಕ್ಕೂ ಮೇಲ್ಪಟ್ಟ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿ, ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದ್ದಾರೆ. ಇದರಿಂದ ಪ್ರಭಾವಿತರಾದ ಅನೇಕ ಮಕ್ಕಳು ತಾವೇ ಲೇಖನಗಳನ್ನು ಬರೆಯುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಇಂಥಹ ಲೇಖನಗಳನ್ನು ಒಂದೆಡೆ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಆ ಪುಸ್ತಕಕ್ಕೆ ‘ಕಲರವ’ ಎಂದು ಹೆಸರಿಟ್ಟು, ಆ ಪುಷ್ತಕವನ್ನು ಕೋಲಾರದ ಆದಿಮ ಕೇಂದ್ರದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಸಾಹಿತಿಗಳಾದ ಸ.ರಘುನಾಥ್ ರವರು ಲೋಕಾರ್ಪಣೆ ಮಾಡಿ ಶಾಲೆಯ ಸಾಧನೆಯನ್ನು ಮೆಚ್ಚಿದ್ದಾರೆ. ಪ್ರವಾಸ, ಹೊರಸಂಚಾರಗಳ ಮೂಲಕ ಪರಿಸರದ ಅಗಾಧತೆಯನ್ನು ಪರಿಚಯ ಮಾಡಿಸುವುದರ ಜೊತೆಗೆ, ಪರಿಸರದ ಬಗ್ಗೆ ಮಕ್ಕಳಲ್ಲಿ ಪ್ರೀತಿಯನ್ನು ಮೂಡಿಸಿದ್ದಾರೆ. ಅಷ್ಟೇ ಅಲ್ಲದೇ ಬೀಜ ನೆಡುವ ಕಾರ್ಯಕ್ರಮದಂತಹ ಅತಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
‘ನನ್ನ ಅದೃಷ್ಟ ಎಂದರೆ ನನ್ನೊಂದಿಗೆ ಕೆಲಸ ಮಾಡಿದ ಮತ್ತು ಮಾಡುವ ಶಾಲೆಯ ಎಲ್ಲ ಶಿಕ್ಷಕರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕನ್ನಮಂಗಲ ಊರಿನ ಜನ ನಮ್ಮ ಬೆನ್ನಿಗೆ ನಿಂತರು. ಊರಿನ ಯುವಕರೆಲ್ಲ ಸೇರಿಕೊಂಡು ಕಟ್ಟಿರುವ ಸ್ನೇಹ ಯುವಕರ ಸಂಘ ಸಹಾಯ ಮಾಡಿತು. ಹೀಗಾಗಿ ಮಕ್ಕಳಿಗಾಗಿ ನಾನೊಂದಿಷ್ಟು ಕೆಲಸ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ ಶಿಕ್ಷಕ ಎಂ.ದೇವರಾಜ್.