Home News ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌

0

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಮಿನಿವಿಧಾನಸೌಧದಲ್ಲಿ ಶನಿವಾರ ನಡೆದ 59 ನೇ ಕನ್ನಡ ರಾಜ್ಯೋತ್ಸವ, ಕಾರ್ಯಕ್ರಮಕ್ಕೆ ಗೈರು ಹಾಜರಾದ ಒಂಬತ್ತು ಮಂದಿ ಅಧಿಕಾರಿಗಳಿಗೆ ನೋಟೀಸ್‌ ಜಾರಿಯಾಗುವುದರೊಂದಿಗೆ ಪರ್ಯಾವಸಾನಗೊಂಡಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ ಸೆಟ್‌ ವಾದನದೊಂದಿಗೆ ಭುವನೇಶ್ವರಿಯ ಭಾವಚಿತ್ರದ ಅಲಂಕೃತ ವಾಹನದ ಮೆರವಣಿಗೆ ನಡೆಸಲಾಯಿತು. ಉಲ್ಲೂರುಪೇಟೆಯ ಮಂಜುನಾಥ್‌ ಸೈಕಲ್‌ಗೆ ಕನ್ನಡ ಕಲಾವಿದ, ಸಾಹಿತಿಗಳ ಭಾವಚಿತ್ರಗಳನ್ನೊಳಗೊಂಡ ಸ್ಥಬ್ದಚಿತ್ರವನ್ನು ಅಲಂಕರಿಸಿಕೊಂಡು ಮೆರವಣಿಗೆಯ ಮುಂಚೂಣಿಯಲ್ಲಿ ಗಮನ ಸೆಳೆದರೆ, ಆರೋಗ್ಯ ಇಲಾಖೆಯ ಸ್ಥಬ್ದ ಚಿತ್ರ ನಗು ಮಗುವಿನ ಬಗ್ಗೆ ತಿಳಿಸುತ್ತಿತ್ತು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಕನ್ನಡ ಪುಸ್ತಕಗಳನ್ನು ಕೊಂಡು ಓದಿ. ಮನೆಯಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಪುಸ್ತಕವು ಓಡಾಡುವ ಗುಡಿಯಿದ್ದಂತೆ. ಕನ್ನಡದ ಸಾಹಿತ್ಯ ಲೋಕ ಚಿರಂತನ, ನಿತ್ಯನೂತನ ಮತ್ತು ಅಮೃತ ಸಮಾನವಾದದ್ದು. ಕನ್ನಡ ನಾಡು ನುಡಿ ಜಲ ಸಂರಕ್ಷಣೆ ನಮ್ಮ ಜವಾಬ್ದಾರಿ. ನಮ್ಮ ನಾಡಿಗಾಗಿ ದುಡಿದಿರುವ ಮಹನೀಯರ ಬಗ್ಗೆ ನಮ್ಮ ಮುಂದಿನ ತಲೆಮಾರಿಗೂ ತಿಳಿಸಿ ಗೌರವವನ್ನು ಹೆಚ್ಚಿಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾಗಿದ್ದು, ನಾಡ ಹಬ್ಬಕ್ಕೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಸೇರಿದ್ದ ಕನ್ನಡಾಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದರು. ಶಾಸಕರು ಮತ್ತು ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವುದಾಗಿ ಸಮಾಧಾನಗೊಳಿಸಿದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯನ್ನು ಪ್ರತಿಧ್ವನಿಸುವ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಶಾಸಕ ಎಂ.ರಾಜಣ್ಣ, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪಿ.ಎಲ್‌.ಡಿ.ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಪುರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್‌, ಅಧ್ಯಕ್ಷೆ ಮುಷ್ಠರಿ ತನ್ವೀರ್‌, ಉಪಾಧ್ಯಕ್ಷೆ ಸುಮಿತ್ರಾರಮೇಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್‌, ಕ.ಸಾ.ಪ ಅಧ್ಯಕ್ಷ ಕೋ.ನಾ.ಶ್ರೀನಿವಾಸ್‌, ಅಮೃತಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.