ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲು, ಕನ್ನಡದ ಭಾಷೆಯ ಬಗ್ಗೆ ಅಭಿಮಾನ ಮೂಡಲು ಸರ್ಕಾರ ಕನ್ನಡಿಗರ ಉದ್ಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಸಾಹಿತಿ ಕಾಗತಿ ವೆಂಕಟರತ್ನಂ ಒತ್ತಾಯಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ಸರ್ಕಾರಿ ಪಿಯು ಕಾಲೇಜು ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ದಿನಪತ್ರಿಕೆಗಳು, ವಾರಪತ್ರಿಕೆಗಳು, ಉತ್ತಮ ಸಾಹಿತ್ಯಾತ್ಮಕ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು. ಹೆಚ್ಚು ಓದುವುದರಿಂದ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ಜೀವನವನ್ನು, ನಮ್ಮ ಸುತ್ತ ಮುತ್ತಲಿನ ಜನಜೀವನವನ್ನು ನೋಡುವ ರೀತಿ ಬದಲಾಗುತ್ತದೆ. ನಮ್ಮ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸುವ ಪ್ರಯತ್ನವನ್ನೂ ಮಾಡಬೇಕು. ಆಗ ಅಭಿವ್ಯಕ್ತಿಸುವ ಕಲೆಯೂ ಸಿದ್ಧಿಸುತ್ತದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಮಾತನಾಡಿ, ಕನ್ನಡ ಶಾಲೆಯಲ್ಲಿಯೇ ಓದಿ ವಿಶ್ವವಿಖ್ಯಾತಿಯನ್ನು ಪಡೆದಿರುವ ಎನ್.ಆರ್.ನಾರಾಯಣಮೂರ್ತಿಯವರು ನಮ್ಮ ತಾಲ್ಲೂಕಿನವರಾಗಿದ್ದಾರೆ. ವಿದ್ಯಾರ್ಥಿಗಳು ಅಂಥಹವರಿಂದ ಪ್ರೇರಣೆ ಹೊಂದಬೇಕು. ನಮ್ಮ ಭಾಷೆಯ ಬಗ್ಗೆ ಅಭಿಮಾನವಿರುವುದರ ಜೊತೆಗೆ ನಮ್ಮೊಂದಿಗಿರುವ ಅನ್ಯ ಭಾಷಿಕರಿಗೂ ಕನ್ನಡವನ್ನು ಕಲಿಸಿ ಎಂದು ಹೇಳಿ, ನೇತ್ರದಾನ ಮತ್ತು ರಕ್ತದಾನದ ಬಗ್ಗೆ ವಿವರಿಸಿದರು.
ಶಿಕ್ಷಕ ವಾಸವಿ ಆರ್.ಮಂಜುನಾಥ್ ಮಾತನಾಡಿ, ಪಾರಂಪರಿಕ ಮೌಲ್ಯಗಳು, ಕನ್ನಡದ ಸಾಹಿತಿಗಳು, ಜಿಲ್ಲೆಯ ಸಾಹಿತ್ಯ ಹಾಗೂ ಕಸಾಪ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.
ಜನಪದ ಗಾಯಕ ದೇವರಮಳ್ಳೂರು ಮಹೇಶ್ ಕನ್ನಡದ ಹಿರಿಮೆ ಸಾರುವ ಹಾಗೂ ಜಾನಪದ ಗೀತೆಗಳನ್ನು ಹಾಡಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಏಳು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ಎಚ್.ಎಂ.ವೇಣು, ದ್ವಿತೀಯ ಸ್ಥಾನ ಪಡೆದ ಎನ್.ನಂದಿತಾ ಮತ್ತು ತೃತೀಯ ಸ್ಥಾನ ಪಡೆದ ಡಿ.ಸುಧಾಕರ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಕಸಾಪ ವತಿಯಿಂದ ಪ್ರಶಂಸಾ ಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಉಪನ್ಯಾಸಕರಾದ ಲಕ್ಷ್ಮಯ್ಯ, ಮುನಿರಾಜು, ರಾಘವೇಂದ್ರ, ಲೋಕೇಶ್, ಶಿಕ್ಷಕ ವಾಸವಿ ಆರ್.ಮಂಜುನಾಥ್, ಕಸಾಪ ಗೌರವ ಕಾರ್ಯದರ್ಶಿ ತ್ಯಾಗರಾಜು, ಸದಸ್ಯ ನಾಗರಾಜು, ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -