ಫೆಬ್ರವರಿ ೨೮ ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಕನ್ನಡ ಭಾಷೆ ಹಾಗೂ ಕನ್ನಡತನವನ್ನು ಉಳಿಸಿ ಬೆಳೆಸಲು ಮತಗಳನ್ನು ನೀಡುವಂತೆ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಬಿ.ಹನುಮಂತಪ್ಪ ಕೋರಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ವಿವಿಧ ರಂಗಗಳಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸಿದ್ದು, ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಉಳಿವು ಹಾಗೂ ಕನ್ನಡ ಮಾದ್ಯಮ ಶಾಲೆಗಳ ಉಳಿಗಾಗಿ, ತಮ್ಮನ್ನು ಬೆಂಬಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡದ ಅಭಿವೃದ್ಧಿ, ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಕನ್ನಡ ಶಾಲೆಗಳನ್ನು ಮುಚ್ಚದಂತೆ ಹಾಗೂ ಉಳಿವಿಗಾಗಿ ಹೋರಾಟ ನಡೆಸುವುದು, ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿಯುಳ್ಳ ಮಹಿಳೆಯರನ್ನು, ಯುವಕರನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹ ಮಾಡುವಂತಹ ಕಾರ್ಯವನ್ನು ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ, ಗ್ರಾಮೀಣ ಭಾಗದ ಕಲೆ, ಸಾಹಿತ್ಯಗಳನ್ನು ಅಭಿವೃದ್ಧಿ ಪಡಿಸುವುದು, ಕನ್ನಡ ಸಾಹಿತ್ಯ ಕುರಿತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವುದು, ಸಾಹಿತ್ಯ ದತ್ತಿ ನಿಧಿಗಳನ್ನು ಸ್ಥಾಪನೆ ಮಾಡುವುದು, ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಅನ್ಯ ಭಾಷಾ ಶಾಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಕನ್ನಡವನ್ನು ಬೆಂಬಲಿಸುವ ಉದ್ದೇಶವಿದೆ. ಗ್ರಂಥ ಭಂಡಾರಗಳಿಗೆ ಉಚಿತವಾಗಿ ಪುಸ್ತಕಗಳನ್ನು ಒದಗಿಸುವಂತಹ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದ್ದು, ಜಿಲ್ಲೆಯ ಶಿಕ್ಷಕರು, ಅಧಿಕಾರಿಗಳು, ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ.
ಕಳೆದ ಅವಧಿಯಲ್ಲಿದ್ದ ಅಧ್ಯಕ್ಷರುಗಳು, ಕೇಂದ್ರ ಕಚೇರಿಗೆ ಲೆಕ್ಕಪತ್ರಗಳನ್ನು ಸಲ್ಲಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ನನಗೆ ಮಾಹಿತಿಯಿಲ್ಲ, ಜಿಲ್ಲಾ ಸಮಿತಿಯಿಂದ ಯಾವುದೇ ಲೆಕ್ಕಗಳನ್ನು ತಾಲ್ಲೂಕುಗಳಿಗೆ ರವಾನೆ ಮಾಡುತ್ತಿರಲಿಲ್ಲ, ಲೆಕ್ಕಗಳನ್ನು ಕೇಳಲು ಸಭೆಯನ್ನೂ ಕರೆಯುತ್ತಿರಲಿಲ್ಲ ಎಂದರು.
ಶಿಕ್ಷಕ ಗೋಪಿನಾಥ್, ದೇವರಾಜ್, ಶಾಮಣ್ಣ, ಸುಂದರಂ, ಮುನಿರತ್ನಾಚಾರಿ, ಶ್ರೀನಿವಾಸಮೂರ್ತಿ, ಸುಂದರಾಚಾರಿ ಮುಂತಾದವರು ಹಾಜರಿದ್ದರು.