ತಾಲ್ಲೂಕಿನ ಗ್ರಾಮಗಳಲ್ಲಿ ಎಲ್ಲಾ ಬೆಳೆಗಳ ಕಟಾವು ಮುಗಿದಿದ್ದು ರೈತರು ಕಣ ಸುಗ್ಗಿ ಮಾಡುವಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನ ಬಹುತೇಕ ರೈತರಿಗೆ ವಾಹನಗಳು ಸಂಚರಿಸುವ ಟಾರು ರಸ್ತೆಗಳೇ ಕಣಗಳಾಗಿವೆ.
ಅದು ಮುಖ್ಯ ರಸ್ತೆ ಆಗಿರಲಿ, ಸಂಪರ್ಕ ರಸ್ತೆ ಆಗಿರಲಿ, ಗ್ರಾಮಾಂತರ ಪ್ರದೇಶಗಳ ಟಾರ್ ರಸ್ತೆಗಳಾಗಿರಲಿ, ಒಟ್ಟಾರೆ ಅತಿ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳಾಗಿದ್ದರೆ ಸಾಕು. ಅದೇ ರೈತರಿಗೆ ಕಣ.
ನಗರದ ಕಾಂಗ್ರೆಸ್ ಭವನದ ಮುಂದಿನ ಹೆಚ್ಚು ಸಂಚಾರದ ರಸ್ತೆಯು ಕೂಡ ಕಣವಾಗಿ ಪರಿಣಮಿಸಿದ್ದು ದ್ವಿಚಕ್ರ ವಾಹನ ಚಾಲಕರಿಗೆ ಕಂಟಕವಾಗಿದೆ. ರಸ್ತೆಗಳೇ ಕಣಗಳಾಗಿರುವುದರಿಂದ ರಸ್ತೆಯ ಮೇಲೆ ವಾಹನ ಚಲಿಸುವುದರಿಂದ ಡಿಸೇಲ್, ಪೆಟ್ರೋಲ್ ಮತ್ತು ವಾಹನಗಳ ಹೊಗೆಗಳಿಂದ ಹಾಗೂ ವಾಹನಗಳ ಟೈರುಗಳಿಗೆ ಅಂಟಿದ ಹೊಲಸು ತ್ಯಾಜ್ಯದಿಂದ ಆಹಾರ ಧಾನ್ಯಗಳು ಕಲುಷಿತ ಗೊಳ್ಳುತ್ತಿವೆ. ರಸ್ತೆಯ ಮೇಲೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದು, ಕಣಗಳ ಧೂಳಿನಿಂದಾಗಿ ತೊಂದರೆಯಾಗುತ್ತಿದೆ.
ನಗರದ ಪೊಲೀಸ್ ಠಾಣೆಯ ಸಮೀಪವೇ, ಕಾಂಗ್ರೆಸ್ ಭವನದ ಮುಂದೆಯೇ ರಸ್ತೆಯ ಮೇಲೆ ಕಣಗಳನ್ನು ಮಾಡುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಆಯಾ ತಪ್ಪಿ ಬೀಳುತ್ತಾ, ಅಪಘಾತಗಳಾಗುತ್ತಿವೆ. ಈ ಬಗ್ಗೆ ಯಾರು ಆಕ್ಷೇಪಣೆ ಮಾಡುತ್ತಿಲ್ಲ. ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಯಾವುದೇ ಅಡಚಣೆಗಳಾಗದಂತೆ ರಸ್ತೆ ನಿಯಮಗಳಿರಬೇಕು. ಆದರೆ ಖಣಗಳನ್ನು ಮಾಡುತ್ತಿರುವ ರಸ್ತೆಗಳ ಮೇಲೆಯೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಾಹನಗಳು ಸಂಚರಿಸುತ್ತಿದ್ದರೂ ಸಹಾ ಈ ಬಗ್ಗೆ ಯಾರು ಆಕ್ಷೇಪಣೆ ವ್ಯಕ್ತಪಡಿಸುತ್ತಿಲ್ಲ, ರಸ್ತೆ ನಿಯಮಗಳೆಲ್ಲ ಉಲ್ಲಂಘನೆಯಾಗುತ್ತಾ, ಅಮಾಯಕ ವಾಹನ ಸವಾರರು ಏಳುತ್ತಾ, ಬೀಳುತ್ತ ಸಂಚರಿಸುತ್ತಿದ್ದಾರೆ.
ಹಿಂದೆ ಖಣ ಸುಗ್ಗಿ ಎಂದರೆ ಹಗಲು, ರಾತ್ರಿಗಳೆನ್ನದೆ, ದುಂಡಾಗಿರುವ ರೋಣಗಲ್ಲಿಗೆ ಜೋಡೆತ್ತುಗಳನ್ನು ಕಟ್ಟಿಕೊಂಡು ಕಟಾವು ಮಾಡಿದ ಬೆಳೆಗಳನ್ನು ತಂದು ವಿಶಾಲವಾದ ಖಣದಲ್ಲಿ ದುಂಡಾಗಿ ಹರಡಿ ಬೆಳೆಗಳನ್ನು ತುಳಿಸುತ್ತಾ ತಿಂಗಳಾನುಗಟ್ಟಲೆ ಖಣಸುಗ್ಗಿಯನ್ನು ಮಾಡುತ್ತಿದ್ದ ಆ ಕಾಲದಲ್ಲಿ ಬೆಳೆಗಳನ್ನು ತುಳಿಸುವ ಖಣಗಳನ್ನು ಪೂಜ್ಯ ಭಾವನೆಗಳಿಂದ ರೈತರು ಕಾಣುತ್ತಿದ್ದರು. ಈಗ ಅಂತಹ ಕಣಗಳೆಲ್ಲ ಮರೆಯಾಗಿವೆ.
‘ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ದೀರ್ಘ ಬಾಳಿಕೆಯ ಸರ್ವಋತು ಕಣಗಳನ್ನು ನಿರ್ಮಿಸಬಹುದು. ಇದರಿಂದ ರಸ್ತೆಕಣಗಳಿಂದ ಆಗುವ ಪ್ರಾಣಾಪಾಯಗಳನ್ನು ತಪ್ಪಿಸಬಹುದು. ಈಗ ಡೀಸಲ್ ಚಾಲಿತ ಬೀಜ ಮಾಡುವ ಯಂತ್ರಗಳೂ ಬಂದಿವೆ. ಕೆಲ ಸಂಸ್ಥೆಗಳು ರೈತರಿಗೆ ಉಪಯುಕ್ತ ಯಂತ್ರಗಳನ್ನು ಬಾಡಿಗೆಗೂ ನೀಡುತ್ತಿದ್ದಾರೆ. ಅವನ್ನು ಬಳಸಿಕೊಳ್ಳಬೇಕು. ರಸ್ತೆಯಲ್ಲಿ ಕಣ ಮಾಡುವುದು ಅವೈಜ್ಞಾನಿಕ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಪರ್ಯಾಯ ವ್ಯವಸ್ಥೆಯ ಬಗ್ಗೆ ತಿಳಿಸಿದರು.
- Advertisement -
- Advertisement -
- Advertisement -
- Advertisement -