ಕಳೆದ ಕೆಲ ದಶಕಗಳಿಂದ ಸರ್ಕಾರಿ ಭೂಮಿಯಲ್ಲಿ ಶ್ರಮವಹಿಸಿ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರ ಜೀವನೋಪಾಯಕ್ಕಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರದಿಂದ ಮಂಜೂರಾದಂತಹ ಭೂಮಿಯನ್ನು ರೈತರು ಮಾರಾಟ ಮಾಡಬಾರದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಹಾಗು ಭೂ ಸಕ್ರಮೀಕರಣ ಸಮಿತಿಯಿಂದ ಆಯೋಜಿಸಲಾಗಿದ್ದ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಗರ್‌ಹುಕುಂ ಫಲಾನುಭವಿಗಳು ಹಿಂದಿನಿಂದಲೂ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದು ಇವರ ಕಲ್ಯಾಣಕ್ಕಾಗಿ ಸರ್ಕಾರ ಅವರಿಗೆ ಭೂಮಿ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡುವ ಮೂಲಕ ಬಲವರ್ಧನೆ ಮಾಡುತ್ತಿದೆ. ಸರ್ಕಾರದಿಂದ ಮಂಜೂರಾದಂತಹ ಜಮೀನಿನಲ್ಲಿ ಉತ್ತಮ ಕೃಷಿ ಮಾಡುವ ಮೂಲಕ ಸರ್ಕಾರದ ಮತ್ತಷ್ಟು ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿ, ಸರ್ಕಾರದಿಂದ ಮಂಜೂರಾದಂತಹ ಜಮೀನಿನಲ್ಲಿ ಸರ್ಕಾರ ನಿಷೇಧಿಸಿರುವ ಬೆಳೆಗಳಾದ ಗಾಂಜಾ, ಅಫೀಮು ಸೇರಿದಂತೆ ನೀಲಗಿರಿಯಂತಹ ಬೆಳೆ ಬೆಳೆಯಬಾರದು. ರೈತರಿಗೆ ಸರ್ಕಾರಿ ಭೂಮಿ ಮಂಜೂರು ಮಾಡುವ ಅಧಿಕಾರ ಇರುವ ಹಾಗೆಯೇ ನಿಷೇಧಿತ ಬೆಳೆ ಬೆಳೆದರೆ ಜಮೀನನ್ನು ವಾಪಸ್ಸು ಪಡೆಯುವ ಅಧಿಕಾರವೂ ಸರ್ಕಾರಕ್ಕೆ ಇರುತ್ತದೆ. ಹಾಗಾಗಿ ಸರ್ಕಾರದಿಂದ ಮಂಜೂರಾಗಿರುವ ಜಮೀನಿನಲ್ಲಿ ಉತ್ತಮ ಕೃಷಿ ಮಾಡಿ ಎಲ್ಲರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಪರಿಶಿಷ್ಠ ಜಾತಿ ಹಾಗೂ ಪಂಗಡದ ೮೧ ಮಂದಿ ಹಾಗು ಸಾಮಾನ್ಯ ೫೬ ಮಂದಿ ಸೇರಿದಂತೆ ಒಟ್ಟು ೧೩೭ ಜನರಿಗೆ ಸುಮಾರು ೨೪೬.೩೮ ಎಕರೆ ಜಮೀನು ಮಂಜೂರು ಮಾಡಿದ ಸಾಗುವಳಿ ಚೀಟಿಗಳನ್ನು ವಿತರಿಸಲಾಯಿತು.
ಪ್ರಭಾರಿ ತಹಸೀಲ್ದಾರ್ ಮಮತಾಕುಮಾರಿ, ಗ್ರೇಡ್ ೨ ತಹಸೀಲ್ದಾರ್ ಮುನಿಕೃಷ್ಣಪ್ಪ, ಭೂ ಸಕ್ರಮೀಕರಣ ಸಮಿತಿಯ ಸದಸ್ಯರಾದ ಅಶ್ವತ್ಥನಾರಾಯಣರೆಡ್ಡಿ, ಪ್ರಮೀಳ ವೆಂಕಟೇಶ್, ಕೃಷ್ಣಪ್ಪ ಹಾಜರಿದ್ದರು.