Home News ಎಸ್. ಗೊಲ್ಲಹಳ್ಳಿ ಜಮೀನಿನಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸಲು ಒತ್ತಾಯ

ಎಸ್. ಗೊಲ್ಲಹಳ್ಳಿ ಜಮೀನಿನಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸಲು ಒತ್ತಾಯ

0

ತಾಲ್ಲೂಕಿನ ಎಸ್.ಗೊಲ್ಲಹಳ್ಳಿ ಜಮೀನಿನಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪನೆ ಮಾಡಿದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಸಾಕಷ್ಟು ಅನುಕೂಲವಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರೇಗೌಡ ತಿಳಿಸಿದರು.
ನಗರದಲ್ಲಿ ಗುರುವಾರ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಈ ನಡುವೆ ರಾಜಕೀಯ ಒತ್ತಡಗಳಿಂದಾಗಿ ಗೌರಿಬಿದನೂರಿನ ವೇದಲವೇಣಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಕರ್ನಾಟಕ ಹಾಲು ಮಹಾ ಮಂಡಳಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗುತ್ತಿದೆ. ಬೆಲೆಬಾಳುವ ಮರಗಳಿರುವ, ಹೈಟೆನ್ಷನ್ ವೈರ್ ಹಾದು ಹೋದ, ಸಾಗಾಣಿಕೆಗೆ ಅನಾನುಕೂಲವಾದ ಆ ಸ್ಥಳ ಪಶು ಆಹಾರ ಮಿಶ್ರಣ ಘಟಕ ಸ್ಥಾಪನೆಗೆ ಸೂಕ್ತವಲ್ಲ.
ತಾಲ್ಲೂಕಿನ ಎಸ್.ಗೊಲ್ಲಹಳ್ಳಿಯ 26 ಎಕರೆ ಜಮೀನನ್ನು ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸಲೆಂದು ಪಶುಪಾಲನಾ ಇಲಾಖೆ ಮತ್ತು ಹಾಲು ಮಹಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಸರ್ಕಾರ ಮಂಜೂರಾತಿ ನೀಡಿದೆ. ಈ ಸಂಬಂಧವಾಗಿ ಮಾರುಕಟ್ಟೆಯ ಬೆಲೆಯ ಶೇ.10 ರಷ್ಟನ್ನು ಅಂದರೆ 8,55,067 ರೂಗಳನ್ನು ಈಗಾಗಲೇ ಒಕ್ಕೂಟವು ಸರ್ಕಾರಕ್ಕೆ ಪಾವತಿ ಮಾಡಿದೆ. ಎಸ್.ಗೊಲ್ಲಹಳ್ಳಿಯು ಭೌಗೋಳಿಕವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ನಡುವೆ ಇದೆ. ಈ ಜಮೀನು ಚಿಂತಾಮಣಿ, ಬಾಗೇಪಲ್ಲಿ ರಸ್ತೆಗೆ ಹೊಂದಿಕೊಂಡಿದ್ದು ಸಾಗಾಣಿಕೆಗೆ ತುಂಬಾ ಸಲೀಸಾಗಿದೆ. ಆದರೆ ಮೇದಲವೇಣಿ ತಲುಪಲು ಶಿಡ್ಲಘಟ್ಟ ತಾಲ್ಲೂಕಿನಿಂದ 80 ಕಿ.ಮೀ ಕ್ರಮಿಸಬೇಕು. ಇದರಿಂದ 20 ಟನ್ ಸಾಮರ್ಥ್ಯದ ವಾಹನ ಒಂದು ಕಿ.ಮೀ ಗೆ 25 ರೂ ನಂತೆ 2000 ರೂಗಳು ಹೆಚ್ಚುವರಿಯಾಗಿ ವೆಚ್ಚ ಮಾಡಬೇಕು. ಈ ಲೆಕ್ಕದಲ್ಲಿ ಒಕ್ಕೂಟವು 1.4 ಕೋಟಿ ರೂ ಒಂದು ವರ್ಷಕ್ಕೆ ಹೆಚ್ಚುವರಿಯಾಗಿ ಸಾಗಾಣಿಕಾ ವೆಚ್ಚ ಭರಿಸಬೇಕಾಗುತ್ತದೆ. ಇದು ಹಾಲು ಉತ್ಪಾದಕ ಬಡ ರೈತನ ಮೇಲೆ ಆಗುವ ಪ್ರಹಾರವಾಗಿದೆ.
ಮೇದಲವೇಣಿಯ ಜಮೀನು ಕೇವಲ 8 ಎಕರೆ ಮತ್ತು ಗುತ್ತಿಗೆ ಆಧಾರವಾದ್ದರಿಂದ ಕೆಎಂಎಫ್ ಸ್ವತ್ತಾಗದು. ಅದೇ ಎಸ್.ಗೊಲ್ಲಹಳ್ಳಿಯ ಜಮೀನು 26 ಎಕರೆ ಇದ್ದು, ಸರ್ಕಾರದಿಂದ ಒಕ್ಕೂಟಕ್ಕೆ ಹಸ್ತಾಂತರಿಸಲಾಗಿದೆ. ಇದರಿಂದಾಗಿ ಘಟಕ ವಿಸ್ತರಣೆಗೆ ಸಾಕಷ್ಟು ಸ್ಥಳಾವಕಾಶವಿದೆ.
ಸಾದಲಿ ಹೋಬಳಿ ಅತೀ ಹಿಂದುಳಿದ ಪ್ರದೇಶವಾಗಿದ್ದು, ಅತೀ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು ವರ್ಷಗಳಿಂದ ಸತತ ಬರಗಾಲದಿಂದ ರೈತರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸುವುದರಿಂದ ವಲಸೆ ಹೋಗುವಿಕೆಯನ್ನು ತಪ್ಪಿಸಬಹುದು, ನೂರಾರು ಮಂದಿಗೆ ಉದ್ಯೋಗ ನೀಡಬಹುದು. ಈಗಾಗಲೇ ಗೌರಿಬಿದನೂರು ತಾಲ್ಲೂಕಿನ ರಾಜಾನುಕುಂಟೆಯಲ್ಲಿ ಫೀಡ್ ಫ್ಯಾಕ್ಟರಿಯಿದೆ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿಯಲ್ಲಿನ 26 ಎಕರೆಯಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸುವುದರಿಂದ ಪ್ರಾದೇಶಿಕ ಅಸಮತೋಲನೆಯನ್ನು ತಪ್ಪಿಸಬಹುದಾಗಿದೆ.
ಸಂಬಂಧಪಟ್ಟವರು ಕೂಲಂಕುಶವಾಗಿ ಪರಿಶೀಲಿಸಿ ಸಾದಲಿ ಹೋಬಳಿ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಹಾಲು ಉತ್ಪಾದಕರ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಸ್.ಗುಂಡ್ಲಹಳ್ಳಿ ರಾಮದಾಸ್, ಸಾದಲಿ ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಎಸ್.ಪಿ.ವಿಜಯಕುಮಾರ್, ಗೊರಮಡುಗು ಎಂ.ಪಿ.ಸಿ.ಎಸ್ ಕಾರ್ಯದರ್ಶಿ ದೇವರಾಜ್, ಎಲ್.ಮುತ್ತುಗದಹಳ್ಳಿ ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಎಂ.ಮುನಿರೆಡ್ಡಿ, ದೊಡ್ಡದಾಸೇನಹಳ್ಳಿ ವಿ.ಕೃಷ್ಣಪ್ಪ, ಬೆಳ್ಳೂಟಿ ಶ್ರೀನಾಥ್, ವೀರಾಪುರ ಎನ್.ನಾಗರಾಜ್, ಕಾಳದಾನಕುಂಟೆ ನಾಗೇಶ್ ಹಾಜರಿದ್ದರು.