ಸಮಾಜದ ಎಲ್ಲಾ ವರ್ಗದ ಜನತೆಯು ಸಮಾನತೆಯಿಂದ ಬಾಳುವಂತಾಗಬೇಕು ಎಂದು ಶೂದ್ರಶಕ್ತಿ ಸಮಿತಿಯ ಅಧ್ಯಕ್ಷ ಬಿ.ಆರ್.ರಾಮೇಗೌಡ ಹೇಳಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಶೂದ್ರಶಕ್ತಿ ತಾಲ್ಲೂಕು ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ ಶೋಷಣೆಗೊಳಪಡುತ್ತಿರುವ ಶೂದ್ರಶಕ್ತಿಗಳು ಒಂದಾಗುವುದರೊಂದಿಗೆ ಮನುಸಂಸ್ಕೃತಿಯ ಅಂಶಗಳ ವಿರುಧ್ದ ಹೋರಾಟ ಮಾಡಬೇಕಾಗಿದೆ. ಅವರವರ ಕಸುಬುಗಳಿಗೆ ಅನುಗುಣವಾಗಿ ಜಾತಿಗಳನ್ನು ವಿಭಾಗಿಸಲಾಗಿದೆ. ಈ ಸತ್ಯವನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬ ನಾಗರಿಕರು ಸಮಾನತೆಯ ಜೀವನ ನಡೆಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಮಾತನಾಡಿ ತೀವ್ರವಾದ ಬರಗಾಲದಿಂದಾಗಿ ರೈತರ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಹಬ್ಬ ಇತ್ತೀಚೆಗೆ ಮಂಕಾಗುತ್ತಿದೆ. ಈ ಭಾಗದ ರೈತರು ನೀರಿನ ಕೊರತೆಯಿಂದಾಗಿ ವ್ಯವಸಾಯ ಮಾಡಲಾಗದೇ ಅತ್ತ ನಗರಗಳ ಕಡೆ ವಲಸೆ ಹೋಗಲಾಗದ ಅತಂತ್ರ ಸ್ಥಿತಿಯಲ್ಲಿದ್ದು, ರೈತರ ಉಳಿವಿಗಾಗಿ ಹೋರಾಟಗಳನ್ನು ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಅಪ್ಪೇಗೌಡನಹಳ್ಳಿಯ ರೈತ ಕೆ.ಆನಂದಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ಹಾಪ್ಕಾಮ್ಸ್ನ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ಶೂದ್ರಶಕ್ತಿ ಸಮಿತಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಹೆಚ್.ಟಿ.ಸುದರ್ಶನ್, ಅಧ್ಯಕ್ಷ ಎಸ್.ಬೈರೇಗೌಡ, ಮತ್ತಿತರರು ಹಾಜರಿದ್ದರು.