ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ರೀಲರುಗಳು ಧರಣಿ ಕುಳಿತಿರುವುದು ಎರಡನೇ ದಿನಕ್ಕೆ ಮುಂದುವರೆದಿದೆ.
ಇ–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ರೀಲರುಗಳು ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಕೆಂಪರೆಡ್ಡಿ, ‘ರೈತ ಮತ್ತು ರೀಲರು ಎರಡೂ ಆಗಿರುವ ನನಗೆ ಎರಡರ ಕಷ್ಟ ಸುಖ ತಿಳಿದಿದೆ. ಒಂದು ಕೈಯಿಂದ ನಾವು ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಅಧಿಕಾರಿಗಳು ರೈತರು ಮತ್ತು ರೀಲರುಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು. ಒಬ್ಬರ ನಡುವೆ ಕಂದಕವನ್ನು ಸೃಷ್ಟಿಸಬಾರದು’ ಎಂದು ತಿಳಿಸಿದರು.
ಪ್ರತಿ ದಿನ ನಮ್ಮ ರೇಷ್ಮೆ ಗೂಡಿನ ಮಾರುಕಟ್ಟೆಗೆ 800 ರಿಂದ 900 ಲಾಟ್ ರೇಷ್ಮೆ ಗೂಡುಗಳು ಬರುತ್ತವೆ. ಎರಡು ದಿನಗಳಿಂದ ರೀಲರುಗಳು ಮುಷ್ಕರ ನಡೆಸುತ್ತಿರುವುದರಿಂದ ಅಧಿಕಾರಿಗಳು ರೈತರು ತಂದ ಗೂಡುಗಳನ್ನು ವಿಜಯಪುರ, ಎಚ್.ಕ್ರಾಸ್, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯ ರೇಷ್ಮೆ ಗೂಡಿನ ಮಾರುಕಟ್ಟೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಇ–ಹರಾಜು ಪದ್ಧತಿ ಇಲ್ಲ. ಹಳೆಯ ರೀತಿಯಲ್ಲಿ ಹರಾಜು ಮಾಡಲಾಗಿದೆ. ಅದನ್ನೇ ನಮ್ಮೂರಿನ ಮಾರುಕಟ್ಟೆಯಲ್ಲಿಯೇ ಮಾಡಬಹುದಿತ್ತು. ಹಲವಾರು ವರ್ಷಗಳಿಂದ ರೈತರು ಮತ್ತು ರೀಲರುಗಳು ಹೊಂದಿಕೊಂಡು ಇರುವಾಗ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿಸಬಾರದು ಎಂದು ಹೇಳಿದರು.
ರಾಮನಗರ ಮತ್ತು ಕೊಳ್ಳೇಗಾಲದಲ್ಲೂ ರೀಲರುಗಳು ಇ–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಕೂಗು ಪ್ರಾರಂಭಿಸಿದ್ದಾರೆ. ಅವರೂ ನಮ್ಮಂತೆಯೇ ಇದನ್ನು ವಿರೋಧಿಸಿ ಮುಷ್ಟಕ ಹೂಡಲಿದ್ದಾರೆ ಎಂದರು.
ರೀಲರುಗಳಲ್ಲಿ ಬಹುತೇಕ ಮಂದಿ ಮುಸ್ಲೀಮರೇ ಇರುವ ಕಾರಣ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲೀಂ ರೀಲರುಗಳು ಪ್ರಾರ್ಥನೆಗೆ ತೆರಳಿ ವಾಪಸಾಗಿ ಧರಣಿಯಲ್ಲಿ ಸಹಕರಿಸಿದ ಹಿಂದೂ ರೀಲರ್ಗಳಿಗೆ ಸಿಹಿ ಹಂಚಿದರು.
ರೀಲರುಗಳಾದ ಜಿ.ರೆಹಮಾನ್, ಸಮೀವುಲ್ಲಾ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಮಂಜು, ರಾಮಕೃಷ್ಣ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -
- Advertisement -