ಚಿತ್ರಪಟಗಳ ಪ್ರದರ್ಶನದ ಮೂಲಕ ಎನ್.ಆರ್. ನಾರಾಯಣಮೂರ್ತಿ ವ್ಯಕ್ತಿಪರಿಚಯ
ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ 69ನೇ ಜನ್ಮ ದಿನದ ಪ್ರಯುಕ್ತ ಅವರ ಸ್ವಗ್ರಾಮ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನಲ್ಲಿ ಶನಿವಾರ ವಿಶಿಷ್ಠವಾಗಿ ಆಚರಿಸಲಾಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನವೋದಯ ವಿದ್ಯಾಸಂಸ್ಥೆ ಹಾಗೂ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗೆ ಅದೇ ಗ್ರಾಮದ ಎನ್.ಆರ್ ನಾರಾಯಣಮೂರ್ತಿ ಅವರನ್ನು ಪರಿಚಯಿಸಲು ಅವರ ಕುರಿತಂತೆ ಚಿತ್ರಪಟಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಎನ್.ಆರ್.ನಾರಾಯಣಮೂರ್ತಿ ಅವರ ಲೇಖನಗಳು, ಅವರ ಕುರಿತ ಚಿತ್ರ ಲೇಖನಗಳು, ಬಾಲ್ಯ ಹಾಗೂ ಕುಟುಂಬದ ಚಿತ್ರಪಟಗಳು, ವಿವಿಧ ಗಣ್ಯರೊಡನೆ ಅವರಿರುವ ಚಿತ್ರಗಳು, ಇನ್ಫೋಸಿಸ್ ಯಶೋಗಾಥೆ, ಅವರ ಹಸ್ತಾಕ್ಷರ, ಶಿಡ್ಲಘಟ್ಟಕ್ಕೆ ಆಗಮಿಸಿದಾಗಿನ ಚಿತ್ರಗಳು, ಅಬ್ದುಲ್ ಕಲಾಂ ಮತ್ತು ಡಾ.ಕೃಷ್ಣಮೂರ್ತಿ ವೆಂಕಟರಾಮ್ ಅವರ ಕಾಲಿಗೆರಗುತ್ತಿರುವ ಚಿತ್ರಗಳು ಮುಂತಾದ ಅಪರೂಪದ ಚಿತ್ರಪಟಗಳನ್ನು ಮೇಲೂರಿನ ಎಂ.ಆರ್.ಪ್ರಭಾಕರ್ ಅವರು ಅಲಂಕಾರಿಕವಾಗಿ ಜೋಡಿಸಿ ಪ್ರದರ್ಶಿಸಿದ್ದರು.
ಈ ಪ್ರದರ್ಶನವನ್ನು ಉದ್ಘಾಟಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಕೃಷ್ಣಮೂರ್ತಿ ಮಾತನಾಡಿ,‘ನನ್ನ ಸೋದರತ್ತೆ ಪದ್ಮಾವತಮ್ಮ ಅವರ ಮಗ ಎನ್.ಆರ್. ನಾರಾಯಣಮೂರ್ತಿ ಬಲು ದೊಡ್ಡ ಸಾಧನೆ ಮಾಡಿದರೂ ಸರಳ ಜೀವಿ. ನಮ್ಮ ಶಿಕ್ಷಣ ಸಂಸ್ಥೆಗೆ ಸಾಕಷ್ಟು ನೆರವನ್ನು ಅವರು ನೀಡಿದ್ದಾರೆ. ಅವರ ಹುಟ್ಟಿದ ದಿನ ಇದೇ ಮಣ್ಣಿನ ಮೂಲದ ಅವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಮಾಡಿಸಿಕೊಡಲು ಅನುಕೂಲವಾಗುವ ರೀತಿಯಲ್ಲಿ ಮೇಲೂರು ಎಂ.ಆರ್.ಪ್ರಭಾಕರ್ ಪ್ರದರ್ಶನವನ್ನು ಮಾಡಿದ್ದಾರೆ. ಇದರಿಂದ ನಮ್ಮ ವಿದ್ಯಾರ್ಥಿಗಳು ಸ್ಫೂರ್ತಿಯನ್ನು ಹೊಂದಬೇಕೆಂಬುದು ನಮ್ಮ ಉದ್ದೇಶ. ನಮ್ಮ ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ನಾರಾಯಣಮೂರ್ತಿಯವರ ಜೀವನ ಸಾಧನೆಯ ಚಿತ್ರಪಟಗಳ ಪ್ರದರ್ಶನವನ್ನು ಏರ್ಪಡಿಸಬೇಕು. ನಮ್ಮ ತಾಲ್ಲೂಕಿನ ಶ್ರೇಷ್ಠ ಸಾಧಕರ ಜೀವನದಿಂದ ಮುಂದಿನ ಪೀಳಿಗೆ ಪ್ರೇರಣೆಯನ್ನು ಹೊಂದಬೇಕು’ ಎಂದು ಹೇಳಿದರು.
ಅಂಚೆ ಚೀಟಿ ಸಂಗ್ರಹಕಾರ ಮೇಲೂರು ಎಂ.ಆರ್.ಪ್ರಭಾಕರ್ ಮಾತನಾಡಿ, ‘ನಮ್ಮ ತಾಲ್ಲೂಕಿನ ಹೆಮ್ಮೆಯ ಪುತ್ರ ಎನ್.ಆರ್ ನಾರಾಯಣಮೂರ್ತಿ ಅವರ ಅಭಿಮಾನಿಯಾಗಿ ಅವರ ಕುರಿತಂತೆ ವಿವಿಧ ಪತ್ರಿಕೆ, ಚಿತ್ರಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿದ್ದೆ. ಅವರ ಜನ್ಮದಿನದಂದು ಅವರ ಸ್ವಗ್ರಾಮದ ಕಾಲೇಜಿನಲ್ಲಿ ಪ್ರದರ್ಶಿಸಲು ಸಹಕಾರ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ತಿಳಿಸಿ ತೋರಿಸಲು ಅನುಕೂಲವಾಯಿತು. ವಿದ್ಯಾರ್ಥಿಗಳಿಗೆ ಸಾಧಕರ ಸಾಧನೆಯನ್ನು ತಿಳಿಸಿ ಅವರಿಗೆ ಸ್ಫೂರ್ತಿ ತುಂಬುವ ಕೆಲಸ ಇದಾಗಿದೆ’ ಎಂದು ನುಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸದಸ್ಯರಾದ ಮುನಿರಾಜು, ರಮೇಶ್, ಜಗದೀಶ್ಬಾಬು, ನಾಗರಾಜ್, ದೇವರಾಜ್, ಮಂಜುನಾಥ್, ಪವನ್ಕುಮಾರ್, ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್, ಉಪನ್ಯಾಸಕರಾದ ಉಪೇಂದ್ರಕುಮಾರ್, ಮುನಿಯಪ್ಪ, ನಾಗೇಶ್, ಪ್ರಜ್ವಲ್, ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -