ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಪ್ರಾರಂಭಿಸಿದ್ದ ಇ-ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಕಳೆದ ಎಂಟು ದಿನಗಳಿಂದ ನೂಲು ಬಿಚ್ಚಾಣಿಕೆದಾರರು(ರೀಲರುಗಳು) ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ನಡೆಸುತ್ತಿದ್ದ ಧರಣಿ ಕೊನೆಗೂ ಅಂತ್ಯವಾಗಿದ್ದು ಮಂಗಳವಾರ ಎಂದಿನಂತೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಯಿತು.
ದೇಶದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರ್ಚ್ ೧೦ ರಂದು ಪ್ರಾಯೋಗಿಕವಾಗಿ ಇ–ಹರಾಜು ಶುರುಮಾಡಿದ್ದು ಸಣ್ಣ ಪುಟ್ಟ ಲೋಪದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ಎರಡು ಮೂರು ಭಾರಿ ಸ್ಥಗಿತಗೊಳಿಸಲಾಗಿತ್ತು. ಇ–ಹರಾಜು ಪ್ರಕ್ರಿಯೆಯ ತಂತ್ರಾಂಶವನ್ನು ಉನ್ನತೀಕರಿಸಿ ಮೇ ೧೬ ರಂದು ಮತ್ತೇ ಚಾಲನೆ ನೀಡಲಾಗಿತ್ತು.
ಮುಖ್ಯವಾಗಿ ರೈತರು ಮತ್ತು ರೀಲರ್ಗಳಿಬ್ಬರಿಗೂ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಶುರುಮಾಡಿದ್ದ ಇ-–ಹರಾಜು ಪ್ರಕ್ರಿಯೆಯಿಂದ ರೀಲರ್ಗಳಿಗೆ ಅಗತ್ಯ ವಿರುವಷ್ಟು ಗೂಡು ಖರೀದಿಸಲು ಆಗುವುದಿಲ್ಲ, ಅನಕ್ಷರಸ್ಥ ರೀಲರ್ಗಳಿಗೆ ಮೊಬೈಲ್ ಫೋನ್ ಬಳಕೆ ಮಾಡಲು ಆಗದಿರುವುದರಿಂದ ಶಾಲಾ ಮಕ್ಕಳನ್ನು ಹರಾಜಿನಲ್ಲಿ ಬಾಗವಹಿಸಲು ಕರೆತರಬೇಕು ಎಂಬ ಕಾರಣವನ್ನಿಟ್ಟಿಕೊಂಡು ಕಳೆದ ಸೆಪ್ಟೆಂಬರ್ ೧೨ ರಿಂದ ರೀಲರ್ಗಳು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯದಂತೆ ಮಾಡುವ ಮೂಲಕ ಎಂಟು ದಿನಗಳ ಕಾಲ ಧರಣಿ ನಡೆಸಿದ್ದರು.
ಸೋಮವಾರ ರೇಷ್ಮೆ ಗೂಡು ಕೃಷಿ ಅಭಿವೃದ್ಧಿ ಆಯುಕ್ತ ಸತೀಶ್ ಹಾಗೂ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ರೀಲರ್ ಹಾಗು ರೈತ ಮುಖಂಡರ ಸಭೆಯಲ್ಲಿ ಚರ್ಚಿಸಿ ಸರ್ಕಾರ ಜಾರಿಗೊಳಿಸಿರುವ ಇ-ಹರಾಜು ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಆಗುವುದಿಲ್ಲ. ಬದಲಿಗೆ ಇ–ಹರಾಜು ಪ್ರಕ್ರಿಯೆಯಲ್ಲಿ ಇರುವ ಸಣ್ಣ ಪುಟ್ಟ ಲೋಪ ದೋಷಗಳನ್ನು ಸರಿಪಡಿಸಲಾಗುವದು. ನೂತನ ವ್ಯವಸ್ಥೆಗೆ ರೀಲರ್ಗಳು ಹೊಂದಿಕೊಳ್ಳಬೇಕು. ಇಂದಿನಿಂದ ಮೂರು ದಿನಗಳ ಕಾಲ ಮೊದಲಿನಂತೆ ಬಹಿರಂಗ ಹರಾಜು ನಡೆಸುವುದು ಹಾಗೂ ಸೆಪ್ಟೆಂಬರ್ ೨೩ ರ ಶುಕ್ರವಾರದಿಂದ ಮಾರುಕಟ್ಟೆಯಲ್ಲಿ ಇ–ಹರಾಜು ಮೂಲಕ ವಹಿವಾಟು ನಡೆಸಲು ತೀರ್ಮಾನಿಸಲಾಯಿತು.
ಅದರಂತೆ ಮಂಗಳವಾರ ಬೆಳಗ್ಗೆ ಮಾರುಕಟ್ಟೆಗೆ ಎಂದಿನಂತೆ ಸುಮಾರು ೭೦೦ ಲಾಟು (೩೫ ಟನ್) ಗೂಡು ಆವಕವಾಗಿದ್ದು ರೇಷ್ಮೆ ಗೂಡಿನ ಗರಿಷ್ಠ ದರ ೪೩೮ ಕ್ಕೇರಿದೆ.
ಕಳೆದ ಎಂಟು ದಿನಗಳಿಂದ ಮಾರುಕಟ್ಟೆಯ ಮುಂಭಾಗದಲ್ಲಿದ್ದ ಶಾಮಿಯಾನದ ಕೆಳಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ನಗರದ ಬಹುತೇಕ ರೀಲರ್ಗಳು ಮಂಗಳವಾರ ಮಾರುಕಟ್ಟೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ರೇಷ್ಮೆ ಗೂಡು ಖರೀದಿಸಿದರು.