ನಗರದ ವಿವಿಧ ಬಡಾವಣೆಗಳಲ್ಲಿ ದೇವತೆಗಳ ಜಾತ್ರಾ ಮಹೋತ್ಸವವನ್ನು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಸಿದ್ದಾರ್ಥನಗರ, ಕುರುಬರಪೇಟೆ, ಕಾಮಟಿಗರಪೇಟೆ, ನೆಲ್ಲೀಮರದಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಪೂಜಮ್ಮ, ಮಾರಮ್ಮ ಮತ್ತು ಗಂಗಮ್ಮ ದೇವತೆಗಳಿಗೆ ಜಾತ್ರೆಯ ಅಂಗವಾಗಿ ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಪೂಜೆ ಸಲ್ಲಿಸಿದರು.
ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವಗಳು, ಜನತೆಯಲ್ಲಿ ಸಾಮರಸ್ಯ ಮೂಡಿಸಲು ಸಹಕಾರಿಯಾಗುತ್ತದೆ. ಎಲ್ಲಾ ಜನರು ಒಟ್ಟಿಗೆ ಕೂಡಿ ಬಾಳಲು ಅನುಕೂಲ ಕಲ್ಪಿಸುವುದರ ಜೊತೆಗೆ, ಎಲ್ಲಾ ಜನರು ಸಂಭ್ರಮ ಸಡಗರಗಳಿಂದ ಧಾರ್ಮಿಕ ಆಚರಣೆ ಮಾಡಲು ಸಾಧ್ಯವಾಗುತ್ತದೆ, ಆದ್ದರಿಂದ ಎಲ್ಲಾ ಸಮುದಾಯಗಳು ಸಂಘಟಿತರಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ವರ್ಷದಲ್ಲಿ ಉತ್ತಮವಾದ ಮಳೆ, ಬೆಳೆಗಳು, ಸಮೃದ್ಧಿಯಾಗಿ ಆಗಲಿ ಎಂದು ಬೇಡಿಕೊಳ್ಳುತ್ತಿರುವುದಾಗಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದವರು ತಿಳಿಸಿದರು.
ಮೋಡಮುಸುಕಿದ ವಾತಾವರಣದ ನಡುವೆಯೆ ನಗರದ ವಿವಿಧ ಬಡಾವಣೆಗಳ ಮನೆ ಮನೆಯಲ್ಲೂ ಜಾತ್ರೆಯ ಸಡಗರ, ಮನೆ ಮಾಡಿತ್ತು, ದೂರದ ಊರುಗಳಿಂದ ಬಂದಿದ್ದ ಬಂಧುಗಳು, ಸ್ನೇಹಿತರಿಂದ ಮನೆಗಳಲ್ಲಿ ಸಂಭ್ರಮ ಏರ್ಪಟ್ಟಿತ್ತು, ಜಾತ್ರೆಯ ಅಂಗವಾಗಿ ನಗರದ ದೇವಾಲಯಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು, ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು, ಜನರು ಪ್ರತಿ ವರ್ಷದಂತೆ ಉತ್ತಮ ಮಳೆ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ಹರಕೆ ಸಲ್ಲಿಸಲು ಹಿರಿಯ ಮುಖಂಡರುಗಳು ಜನತೆಗೆ ನೆರವಾಗಿದ್ದರು.
ಜಾತ್ರೆಯ ವಿಶೇಷವಾಗಿ ನಗರದ ಬೀದಿಗಳನ್ನು ಸ್ವಚ್ಚಗೊಳಿಸಲಾಗಿತ್ತು, ಪ್ರತಿಯೊಂದು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡುವುದರ ಜೊತೆಗೆ, ದೇವಾಲಯಗಳಿಗೆ ಬರುತ್ತಿದ್ದ ಭಕ್ತಾಧಿಗಳಿಗೆ ಪ್ರಸಾದಗಳನ್ನು ವಿತರಣೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಿದ್ದ ದೀಪಗಳನ್ನು ತಮ್ಮ ತಲೆಗಳ ಮೇಲೆ ಹೊತ್ತಿದ್ದ ಹೆಣ್ಣು ಮಕ್ಕಳು ಶ್ರಧ್ದಾಭಕ್ತಿಯಿಂದ ಮೆರವಣಿಗೆಯ ಮೂಲಕ ತೆರಳಿ, ಗಂಗಾದೇವಿ, ಪೂಜಮ್ಮ, ಸಲ್ಲಾಪುರಮ್ಮ, ಯಲ್ಲಮ್ಮ, ನಾಗಲಮುದ್ದಮ್ಮ ಮುಂತಾದ ದೇವರುಗಳಿಗೆ ಹರಕೆ ತೀರಿಸಿದರು.
- Advertisement -
- Advertisement -
- Advertisement -
- Advertisement -