ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ತುಂಬಾ ಸಹಕಾರಿಯಾಗುತ್ತವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಧಾರವಾಡದ ಬಾಲವಿಕಾಸ ಅಕಾಡೆಮಿಯಿಂದ ನಗರದ ಹೊರವಲಯದ ಚಿಂತಾಮಣಿ ಮಾರ್ಗದ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಶಿಬಿರಗಳಲ್ಲಿ ನಡೆಯುವ ಕ್ರಿಯಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಒಳ್ಳೆಯ ನಾಯಕತ್ವ ಗುಣಗಳ ಬೆಳೆವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ ಎಂದರು.
ಗ್ರಾಮೀಣ ಭಾಗದಲ್ಲಿ ಶಾಲೆಗೆ ಬೇಸಿಗೆ ರಜೆ ಬಂದರೆ ಮಕ್ಕಳು ಮನೆ, ಕೃಷಿ, ಹೈನುಗಾರಿಕೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಯಾವುದೆ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಗ್ರಾಮೀಣ ಭಾಗದ ಪರಿಸ್ಥಿತಿ ಹಾಗೂ ಪೋಷಕರ ಆರ್ಥಿಕ, ಸಾಮಾಜಿಕ ಇನ್ನಿತರೆ ಕಾರಣಗಳೂ ಸಹ ಅದಕ್ಕೆ ಕಾರಣವಾಗಿರಬಹುದು.
೧೦ ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಚಿತ್ರಕಲೆ, ಕ್ರಾಫ್ಟ್, ಪೇಪರ್ಕಟಿಂಗ್ ಮಾಡುವುದು. ಹಾಡು ಹಾಡುವುದು, ಕೊಲಾಜ್. ಕ್ಲೇ ಮಾಡಲಿಂಗ್ ರಚನೆ. ಹಾಗೆಯೆ ಕಥೆ, ಕವನ, ಲೇಖನಗಳ ಬರವಣಿಗೆ ಇತ್ಯಾದಿ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಸಂಬಂಧಿಸಿದ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಿಕೊಡಲಾಗುವುದು ಎಂದು ವಿವರಿಸಿದರು.
ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಮೇಲ್ವಿಚಾರಕಿ ಗಿರಿಜಾಂಬಿಕೆ, ರಾಧಮ್ಮ, ಸಂಪನ್ಮೂಲ ವ್ಯಕ್ತಿಗಳಾದ ಕರಾಟೆ ಶಿಕ್ಷಕ ಅರುಣ್ಕುಮಾರ್, ಸಂಗೀತ ಶಿಕ್ಷಕಿ ಮಮತ, ಚಿತ್ರಕಲೆಯ ಕೃಷ್ಣಮೂರ್ತಿ, ಅಂಗನವಾಡಿ ಶಿಕ್ಷಕಿ ನಾಗಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -