ಉರ್ದು ಭವನ ನಿರ್ಮಿಸಲು ಶಾಸಕರ ನಿಧಿಯಿಂದ ೧೦ ಲಕ್ಷ ಹಾಗೂ ನಗರಸಭೆಯಿಂದ ೧೦ ಲಕ್ಷ ರೂಗಳನ್ನು ನೀಡುವುದಾಗಿ ಶಾಸಕ ವಿ.ಮುನಿಯಪ್ಪ ಭರವಸೆ ನೀಡಿದರು.
ನಗರದ ಮುಬಾರಕ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ನಡೆದ ಉರ್ದು ಶೈಕ್ಷಣಿಕ ಸಮ್ಮೇಳನ ಮತ್ತು ಕವಿ ಗೋಷ್ಠಿ (ಮುಷಾಯೇರಾ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉರ್ದು ಭವನ ನಿರ್ಮಾಣ, ಹೊಸ ಉರ್ದು ಶಾಲೆಗಳ ಅಗತ್ಯತೆ, ಉರ್ದು ಶಿಕ್ಷಕರ ಕೊರತೆ, ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ಉರ್ದು ಶಾಲೆಗಳಿಗೆ ಸ್ವಂತ ಕಟ್ಟಡ ಹಾಗೂ ಉರ್ದು ಅಂಗನವಾಡಿಯ ಬೇಡಿಕೆಗಳನ್ನು ಇಟ್ಟಿದ್ದಾರೆ. ಎಲ್ಲಾ ಬೇಡಿಕೆಗಳನ್ನೂ ಹಂತಹಂತವಾಗಿ ಈಡೇರಿಸಲಾಗುವುದು. ಮಕ್ಕಳಿಗೆ ಧಾರ್ಮಿಕ ಆಚಾರ ವಿಚಾರಗಳ ಜೊತೆಗೆ ಭಾಷೆಯನ್ನು ಸಹ ಸಮ್ರ್ಪಕವಾಗಿ ಕಲಿಸಬೇಕಿದೆ. ಭಾಷೆಯ ಸ್ಪಷ್ಟ ಉಚ್ಚಾರಣೆ ಮತ್ತು ಅದರ ಅರ್ಥವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಉರ್ದು ಅಕಾಡೆಮಿಯ ಅಧ್ಯಕ್ಷ ಮುಬಿನ್ ಮುನಾವರ್ ಮಾತನಾಡಿ, ಉರ್ದು ಭಾಷೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಉರ್ದು ಅಕಾಡೆಮಿ ವತಿಯಿಂದ ರಾಜ್ಯದ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಉರ್ದು ಕಲಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸರ್ಕಾರ ಉರ್ದು ಭಾಷೆ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆಯಾದರೂ ಅದು ನಿರೀಕ್ಷಿತ ಮಟ್ಟದಲ್ಲಿಲ್ಲ. ಶಿಕ್ಷಕರ ಕೊರತೆ ಅಪಾರವಾಗಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿ ಉತ್ತಮ ಪ್ರಜೆಗಳಾಗುವಂತೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಜಾಮಾ ಮಸೀದಿ ಇಮಾಮ್ ಮೌಲಾನಾ ನಜರ್ ಇಸ್ಲಾಮಿ, ಮದೀನಾ ಮಸೀದಿ ಇಮಾಮ್ ಮೌಲಾನಾ ಅಲ್ತಮಷ್, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ವಕ್ಫ್ ಬೋರ್ಡ್ ರಫೀವುಲ್ಲಾ, ಜಾಮಾ ಮಸೀದಿ ಅಧ್ಯಕ್ಷ ಸಯ್ಯದ್ ತಾಜ್ ಪಾಷ, ಉಪಾಧ್ಯಕ್ಷ ಅಮೀರ್ ಜಾನ್, ಕಾರ್ಯದರ್ಶಿ ಹೈದರ್ ವಲೀ ಪಾಷ, ಮದೀನ ಮಸೀದಿ ಅಧ್ಯಕ್ಷ ಎಚ್.ಎಸ್.ಫಯಾಜ್, ಕಾರ್ಯದರ್ಶಿ ನಿಸಾರ್ ಅಹಮದ್, ಅಮ್ಜದ್ ನವಾಜ್, ಅಬ್ದುಲ್ ಖಾಲಕ್, ಮುಸ್ಟಾಕ್ ಅಹಮದ್, ಯಾಸ್ಮೀನ್ ತಾಜ್, ಅಮಾನುಲ್ಲಾ, ಸಾದಿಕ್ ಪಾಷ, ಆಜಮ್ ಪಾಷ, ಅನ್ಸರ್ ಖಾನ್, ಮೌಲ, ಮೌಹ್ಸೀನಾ, ನಾತಿಕ್ ಅಲೀಪುರಿ, ಅನ್ಸರ್ ಪಾಷ ಹಾಜರಿದ್ದರು.