ನಗರದ ಮಯೂರ ವೃತ್ತದಲ್ಲಿರುವ ಅಶ್ವತ್ಥಕಟ್ಟೆಯ ಮಹಾಮುಖ್ಯ ಪ್ರಾಣ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಡಾ. ಡಿ.ಟಿ.ಸತ್ಯನಾರಾಯಣರಾವ್ ಅವರು ಉದ್ಘಾಟಿಸಿದರು.
‘ಸಾರ್ವಜನಿಕರು ದಿನ ನಿತ್ಯದ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಆರ್ಥಿಕವಾಗಿ ಸಬಲರಾಗುವ ಜೊತೆಗೆ ಆರೋಗ್ಯವಂತಾಗಿಯೂ ಇರಬೇಕು. ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿನುಸಾರ ಜನರು ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.
ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಡಾ.ಮಾರುತಿ ಪ್ರಸಾದ್ (ಆರ್ಯುವೇದ ), ಡಾ.ನರಸಿಂಹಮೂರ್ತಿ (ಶಸ್ತ್ರಚಿಕಿತ್ಸಾ ಮತ್ತು ಚರ್ಮರೋಗ), ಡಾ.ಸಂತೋಷ್ ಬಾಬು(ಅರವಳಿಕೆ), ಡಾ.ಪೂರ್ಣಿಮ (ಮೆಡಿಕಲ್ ಆಫಿಸರ್) ಮತ್ತಿತರ ತಜ್ಞರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.