Home News ಈ ಶತಮಾನದ ಶ್ರೇಷ್ಠ ಕನ್ನಡಿಗರಲ್ಲಿ ಡಿವಿ.ಜಿ ಅಗ್ರಗಣ್ಯರು

ಈ ಶತಮಾನದ ಶ್ರೇಷ್ಠ ಕನ್ನಡಿಗರಲ್ಲಿ ಡಿವಿ.ಜಿ ಅಗ್ರಗಣ್ಯರು

0

ಆಧುನಿಕ ಭಾರತದ ಭಗವದ್ಗೀತೆ ಎಂದೇ ಕರೆಯಲ್ಪಡುವ ‘ಮಂಕುತಿಮ್ಮನ ಕಗ್ಗ’ ಮತ್ತು ‘ಮರುಳಮುನಿಯನ ಕಗ್ಗ’ ರಚಿಸಿರುವ ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯ ಲೋಕದ ‘ದೃವತಾರೆ’ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಮತ್ತು ಕದಿರಿನಾಯಕನಹಳ್ಳಿಯ ಎಸ್‌.ಆರ್‌.ಇ.ಟಿ ಶಾಲೆಯಲ್ಲಿ ಮಂಗಳವಾರ ನಡೆದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಗುಂಡಪ್ಪನವರು ಹುಟ್ಟಿದ್ದು ಅವಿಭಾಜ್ಯ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಸಾಧಕರಾಗಿ, ನಾಡುನುಡಿಯ ಸೇವಕರಾಗಿದ್ದವರು ಡಿ.ವಿ.ಜಿ.ಯವರು. ಡಿ.ವಿ. ಗುಂಡಪ್ಪನವರು ‘ಆಧುನಿಕ ಸರ್ವಜ್ಞ’ ಎಂದು ಕರೆಸಿಕೊಂಡವರು.
ವಿಶಾಲವಾದ ಆಲದ ಮರದಂತೆ ಅವರ ವ್ಯಕ್ತಿತ್ವ. ಆಲದ ಮರ ನೂರಾರು ಬಿಳಲು ಬಿಟ್ಟು ಉನ್ನತವೂ ವಿಶಾಲವೂ ಆಗಿರುವಂತೆ ಅವರ ವ್ಯಕ್ತಿತ್ವ ಹಲವಾರು ಸತ್ವಗಳಿಂದ ಕೂಡಿ ಶ್ರೀಮಂತವಾದದ್ದು. ಮನಸ್ಸು, ಮಾತು, ಕೃತಿ ಮೂರರಿಂದಲೂ ಅವರು ನಾಡಿನ ಏಳಿಗೆಗೆ ಶ್ರಮಿಸಿದರು. ಅದಕ್ಕಾಗಿ ಸ್ವಂತ ಸುಖಗಳನ್ನೂ ಅಲಕ್ಷಿಸಿದರು. ಸಮಾಜದ ಉನ್ನತಿಗಾಗಿ ತಮ್ಮ ಬದುಕನ್ನೇ ತೇಯ್ದ ಈ ಶತಮಾನದ ಶ್ರೇಷ್ಠ ಕನ್ನಡಿಗರಲ್ಲಿ ಅವರು ಅಗ್ರಗಣ್ಯರು ಎಂದು ವಿವರಿಸಿದರು.
ಕನ್ನಡ ಕವಿಗಳ ಪರಿಚಯವನ್ನು ಮಾಡಿಕೊಟ್ಟ ವಿದ್ಯಾರ್ಥಿಗಳಾದ ವಿ.ಕಾವ್ಯ, ಬಿ.ವಿ.ಸುನೀತ, ವಿಜ್ಞಾನಿಗಳ ಪರಿಚಯ ಮಾಡಿಕೊಟ್ಟ ಎಸ್‌.ಡಿ.ಕುಸುಮ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಮಾಡಿದ ಅಮೃತ, ಕವಿಪರಿಚಯ ಮಾಡಿದ ಸಾಗರ್‌, ಭಾವಗೀತೆಗಳನ್ನು ಹಾಡಿದ ಸಿ.ಎನ್‌.ಶೃತಿ, ಗೋವರ್ಧನ್‌ ರಾಜ್‌, ರಶ್ಮಿ ಅವರಿಗೆ ಕಸಾಪ ವತಿಯಿಂದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಕಸಾಪ ತಾಲ್ಲೂಕು ಘಟಕದಿಂದ ರತ್ನಕೋಶ, ಕನ್ನಡ ಮಾತನಾಡುವ ಬಗೆ, ಉಕ್ತಲೇಖನ ಬರೆಯುವ ಬಗೆ ಮುಂತಾದ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಲಾಯಿತು. ಶಾಲೆಯ ಆವರಣದಲ್ಲಿ ಗಣ್ಯರು ಸಸಿ ನೆಟ್ಟರು. ಜಾನಪದ ಗಾಯಕ ದೇವರಮಳ್ಳೂರು ಮಹೇಶ್‌ ಜಾನಪದ ಗೀತೆಗಳನ್ನು ಹಾಡಿದರು.
ಎಸ್‌.ಆರ್‌.ಇ.ಟಿ ಸಂಸ್ಥೆಯ ಅಧ್ಯಕ್ಷ ರಾಮಚಂದ್ರರೆಡ್ಡಿ, ಕಸಾಪ ತಾಲ್ಲೂಕು ಉಪಾಧ್ಯಕ್ಷ ಚೌಡಸಂದ್ರ ಪಿ.ಈ. ಕರಗಪ್ಪ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಕಸಬಾ ಹೋಬಳಿ ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ರಮೇಶ್‌, ಲೋಕೇಶ್‌, ಮುಖ್ಯಶಿಕ್ಷಕರಾದ ಗೌರಿಶಂಕರ್‌, ಟಿ.ವಿ.ಬೈರಪ್ಪ, ಶಿಕ್ಷಕರಾದ ಎಂ.ಕೃಷ್ಣಪ್ಪ, ಹನುಮಂತಪ್ಪ, ರಾಮಕೃಷ್ಣಾರೆಡ್ಡಿ, ನಾಗಚಂದ್ರ, ನಾರಾಯಣಸ್ವಾಮಿ, ಪಂಕಜ, ವೆಂಕಟೇಶ್‌ನಾಯಕ್‌, ಕೃಷ್ಣಾರೆಡ್ಡಿ, ಗಾಯಿತ್ರಿ, ಮುನಿರಾಜು, ನರಸಿಂಹನ್‌, ಮಾಲಾ, ಭವ್ಯ, ಬ್ರಹ್ಮಿಣಿ, ದೇವಿಕ ಮತ್ತಿತರರು ಹಾಜರಿದ್ದರು.