ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರತಿ ವರ್ಷವೂ ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಅಪಾಯದಲ್ಲಿರುವ ಜೀವಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ. ರವಿಶಂಕರ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತಾಲ್ಲೂಕಿನಿಂದ ಪ್ರತಿ ತಿಂಗಳು ೩೦೦ ಯೂನಿಟ್‌ಗಳಷ್ಟು ರಕ್ತವನ್ನು ನಿರೀಕ್ಷೆ ಮಾಡುತ್ತಿದ್ದು ಪ್ರಸ್ತುತ ೧೮೦ ರಿಂದ ೨೦೦ ಯೂನಿಟ್‌ಗಳಷ್ಟು ರಕ್ತವನ್ನು ದಾನಿಗಳು ದಾನಮಾಡುತ್ತಿದ್ದಾರೆ. ವಾರ್ಷಿಕವಾಗಿ ೩೦೦೦ ಯೂನಿಟ್ ಸಂಗ್ರಹ ಮಾಡುವ ಗುರಿ ಹೊಂದಿದ್ದೇವೆ. ಆರೋಗ್ಯ ಇಲಾಖೆಯಿಂದ ತಾಲ್ಲೂಕಿನ ೯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದಲೂ ವರ್ಷಕ್ಕೆ ಎರಡು ಬಾರಿ ರಕ್ತ ಸಂಗ್ರಹ ಕಾರ್ಯ ಮಾಡಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಇದರಿಂದ ಅಪಘಾತಗಳು, ಹೆರಿಗೆ ಮುಂತಾದ ಸನ್ನಿವೇಶಗಳಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಗೌರವಾಧ್ಯಕ್ಷ ಮೊಹಮದ್ ಖಾಸಿಂ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರ ಮೆದುಳು, ಹೃದಯ, ಹಾಗೂ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಶಿಬಿರದಲ್ಲಿ 300 ಯೂನಿಟ್ ರಕ್ತ ಸಂಗ್ರಹಣೆಯಾಯಿತು. ರಕ್ತದಾನ ಮಾಡಿದ ನಾಗರಿಕರಿಗೆ ಹಣ್ಣು, ಹಣ್ಣಿನ ರಸ್ ಮತ್ತು ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು.
ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ. ಗುರುರಾಜರಾವ್, ಡಿ.ಟಿ.ಸತ್ಯನಾರಾಯಣರಾವ್, ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್, ಕಾರ್ಯದರ್ಶಿ ಇಮ್ತಿಯಾಜ್ ಪಾಷ, ಅಕ್ರಂಪಾಷ, ಮುದಸಿರ್‌ಪಾಷ, ರಹಮತ್‌ಪಾಷ, ಜಬೀವುಲ್ಲ, ಅಮೀರ್‌ಪಾಷ, ಜಹೀರ್‌ಪಾಷ, ಮೊಹಮ್ಮದ್‌ಫಾರುಕ್, ಸಯ್ಯದ್ ತೌಫೀಕ್, ಶಬ್ಬೀರ್‌ಪಾಷ, ಶಂಷೀರ್ ಪಾಷ, ಗೌಸ್‌ಖಾನ್ ಆಮೀರಿ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -