ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಡೆಯುವ ಬಹಿರಂಗ ಹರಾಜು ಪದ್ಧತಿಯಲ್ಲಿ ಹಲವಾರು ನ್ಯೂನತೆಗಳಿದ್ದು, ಅವನ್ನು ನಿವಾರಿಸಲು ಇ – ಹರಾಜು ಪದ್ಧತಿಯನ್ನು ಅಳವಡಿಸಲಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ರಾಜ್ಯದ ಒಂಭತ್ತು ಜಿಲ್ಲೆಗಳ ಇಲಾಖೆಯ 350 ಅಧಿಕಾರಿಗಳಿಗೆ ಇ–ಹರಾಜು ಪದ್ಧತಿಯ ಬಗ್ಗೆ ತಿಳುವಳಿಕೆ ಮೂಡಿಸಲು ಕಾರ್ಯಾಗಾರ ನಡೆಸದ ನಂತರ ಅವರು ಮಾತನಾಡಿದರು.
ಇ–ಹರಾಜು ಪ್ರಕ್ರಿಯೆಯಿಂದ ಮುಕ್ತ, ಪಾರದರ್ಶಕ ಹಾಗೂ ಸದ್ದು ಗದ್ದಲವಿಲ್ಲದ ವಹಿವಾಟಿಗೆ ಅವಕಾಶವಿರುತ್ತದೆ. ರೇಷ್ಮೆ ಬೆಳೆಗಾರರಿಗೆ ಗುಣಮಟ್ಟದ ಗೂಡಿಗೆ ನ್ಯಾಯಯುತ ನಿಖರವಾದ ದರ ಸಿಗುತ್ತದೆ. ನಿಖರ ತೂಕ, ಹಣ ಪವತಿ ವ್ಯವಸ್ಥೆ ಜಾರಿಯಾಗಲಿದೆ. ರೇಷ್ಮೆ ನೂಲು ಬಿಚ್ಚಾಣಿಕೆದಾರರು ಗೂಡಿನ ಗುಣಮಟ್ಟ ಆಧರಿಸಿ ಸೂಕ್ತ ಬೆಲೆ ನೀಡಲು ಯಾವುದೇ ತೊಂದರೆ ಇಲ್ಲದೆ, ಗಲಾಟೆ ಗದ್ದಲವಿಲ್ಲದೆ ವಹಿವಾಟಿನಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ರೀಲರ್ಗಳು ಮಾರುಕಟ್ಟೆಯಲ್ಲಿರುವ ಎಲ್ಲಾ ತಂಡಗಳಿಗೂ ಬಿಡ್ ಮಾಡುವ ಅವಕಾಶವಿರುತ್ತದೆ. ಹರಾಜು ಪ್ರಕ್ರಿಯೆ ಮುಗಿದ ನಂತರ ದರ ಅಂಗೀಕಾರ ಮಾಡಲು ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದರು.ರೇಷ್ಮೆ ಇಲಾಖೆಯಿಂದ ಇ–ಹರಾಜು ಸೌಲಭ್ಯವನ್ನು ಈಗಾಗಲೇ ಕೊಳ್ಳೇಗಾಲ, ರಾಮನಗರ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆ. ಅಲ್ಲಿನ ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಇ–ಹರಾಜು ವಹಿವಾಟಿನ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇ–ಹರಾಜು ಪ್ರಕ್ರಿಯೆಯಿಂದ ಒಂದು ಕೆ.ಜಿ ರೇಷ್ಮೆ ಗೂಡಿನ ಬೆಲೆ 20 ರೂಗಳಿಂದ 40 ರೂಗಳವರೆಗೆ ಹೆಚ್ಚಾಗಿರುವುದು ಕಂಡು ಬಂದಿದೆ. ಈ ಅನುಕೂಲ ರಾಜ್ಯದ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಹೊಂದಿರುವ ಶಿಡ್ಲಘಟ್ಟದಲ್ಲೂ ಅಳವಡಿಸಲು ಕ್ರಮ ವಹಿಸಿದ್ದೇವೆ. ಅಧಿಕಾರಿಗಳು ಅವರವರ ಕ್ಷೇತ್ರಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಮತ್ತು ನೂಲು ಬಿಚ್ಚಾಣಿಕೆದಾರರಿಗೆ ಅರಿವು ಮೂಡಿಸಬೇಕು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಣಕು ಬಿಡ್ಡಿಂಗ್ ವ್ಯವಸ್ಥೆಯನ್ನು ಸಹ ಮಾಡಿ ತೋರಿಸಲಾಯಿತು.
ರೇಷ್ಮೆ ಇಲಾಖೆಯ ಬಿತ್ತನೆ ವಲಯದ ಜಂಟಿ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ವಿನಿಮಯ ಕೇಂದ್ರದ ಮಮೀನ್, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಉಪನಿರ್ದೇಶಕರಾದ ಮೌನುದ್ದೀನ್, ರತ್ನಯ್ಯಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.