ಇ–ಹರಾಜು ನಡೆಸದಿದ್ದಲ್ಲಿ ಸೋಮವಾರದಿಂದ ರೇಷ್ಮೆ ಗೂಡಿನ ಮಾರುಕಟ್ಟೆ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.
ಶುಕ್ರವಾರ ತುರ್ತು ಸಭೆಯನ್ನು ರೇಷ್ಮೆ ಗೂಡಿನ ಮಾರುಕಟ್ಟೆ ಆವರಣದಲ್ಲಿ ನಡೆಸಿದ ರೈತರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಕಳೆದ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ಶಾಸಕ ಎಂ.ರಾಜಣ್ಣನವರ ಸಮಕ್ಷಮದಲ್ಲಿ ರೈತರು ಮತ್ತು ರೀಲರುಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಗುರುವಾರದವರೆಗೂ ಬಹಿರಂಗ ಹರಾಜಿಗೆ ಅವಕಾಶ ಮಾಡಿಕೊಡಲಾಗಿತ್ತು. ಶುಕ್ರವಾರದಿಂದ ಯಥಾ ಪ್ರಕಾರ ಇ–ಹರಾಜು ನಡೆಯುವಂತೆ ಒಕ್ಕೊರಲಿನಿಂದ ತೀರ್ಮಾನಿಸಲಾಗಿತ್ತು.
ಅದರಂತೆ ಮಂಗಳವಾರ, ಬುಧವಾರ ಮತ್ತು ಗುರುವಾರ ಬಹಿರಂಗ ಹರಾಜಿನಲ್ಲಿ ಭಾಗವಹಿಸಿದ ರೀಲರುಗಳು ಶುಕ್ರವಾರದಿಂದ ಇ–ಹರಾಜಿನಲ್ಲಿ ಭಾಗವಹಿಸದೆ ತಮ್ಮ ಮಾತಿಗೆ ತಪ್ಪಿದ್ದಾರೆ. ಶನಿವಾರ ಮತ್ತು ಭಾನುವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜಿನಲ್ಲಿ ರೀಲರುಗಳು ಭಾಗವಹಿಸದಿದ್ದಲ್ಲಿ ಸೋಮವಾರದಿಂದ ಮಾರುಕಟ್ಟೆಯನ್ನು ಅನಿರ್ಧಿಷ್ಟಾವಧಿಯವರೆಗೂ ಬಂದ್ ಮಾಡಲು ತೀರ್ಮಾನಿಸಿದ್ದಾರೆ.
ರೇಷ್ಮೆ ಕೃಷಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಾಧ್ಯವಾದಷ್ಟು ಶನಿವಾರದಿಂದಲೆ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತರದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ರೈತ ಮುಖಂಡರು ವಿನಂತಿಸಿಕೊಂಡರು. ಇ–ಹರಾಜು ಪದ್ಧತಿಯಿಂದ ರೈತರ ಶೋಷಣೆ ತಪ್ಪಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಇ–ಹರಾಜು ಪದ್ಧತಿಯನ್ನು ವಾಪಸ್ ಪಡೆಯಬಾರದೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಶಿವಣ್ಣ, ನಾರಾಯಣಸ್ವಾಮಿ, ತಾದೂರು ಮಂಜುನಾಥ್, ಈರಣ್ಣ, ರಾಮಕೃಷ್ಣಪ್ಪ, ಹಿತ್ತಲಹಳ್ಳಿ ಮುನಿರಾಜು, ಆಯಾಖಾನ್, ಕುಮಾರ್, ನಾಗರಾಜು, ಆನಂದ್, ಹೇಮಣ್ಣ, ರಾಮಾಂಜಿನಪ್ಪ, ದೇವರಾಜು, ಮಂಜುನಾಥ್, ಮುನಿನಂಜಪ್ಪ, ಬೈರಸಂದ್ರ ಮೂರ್ತಿ, ಭಯ್ಯಣ್ಣ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -