ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಈಚೆಗೆ ಇ–ಹರಾಜು ಪ್ರಾರಂಭವಾಗಿದ್ದು, ಶನಿವಾರ ಕೆಲವರು ಗುಂಪುಗೂಡಿ ಬಂದು ಇ–ಹರಾಜು ನಿಲ್ಲಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ ಘಟನೆ ನಡೆಯಿತು. ಪೊಲೀಸರ ಸಹಾಯದಿಂದ, ರೈತರು ಹಾಗೂ ರೀಲರುಗಳ ಮುಖಂಡರ ಬೆಂಬಲದಿಂದ ಅಧಿಕಾರಿಗಳು ಇ–ಹರಾಜನ್ನು ಮುಂದುವರೆಸಿದರು.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ರೀಲರುಗಳು ಮತ್ತು ರೈತ ಮುಖಂಡರು ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಂಬಂಧಪಡದ ರೀಲರ್ ಲೈಸೆನ್ಸ್ ಹೊಂದಿಲ್ಲದವರನ್ನು ಹೊರಕ್ಕೆ ಕಳುಹಿಸುವಂತೆ ಒತ್ತಾಯಿಸಿ, ಇ–ಹರಾಜು ನಡೆಸಲು ಅಧಿಕಾರಿಗಳಿಗೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ, ‘ಹಲವು ವರ್ಷಗಳಿಂದ ಪಾರದರ್ಶಕವಾಗ ಹರಾಜು ವ್ಯವಸ್ಥೆಗೆ ಆಗ್ರಹಿಸುತ್ತಿದ್ದೆವು. ಸರ್ಕಾರ ಈಗ ಇ–ಹರಾಜನ್ನು ತಂದಿದೆ. ಇ–ಹರಾಜು ಪ್ರಕ್ರಿಯೆ ಅತ್ಯಂತ ಪಾರದರ್ಶಕವಾದುದು. ಇದರಿಂದ ರೀಲರುಗಳಲ್ಲದವರು ಮಾರುಕಟ್ಟೆಯಲ್ಲಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬದುಕು ಕಂಡುಕೊಂಡಿದ್ದ ಮಧ್ಯವರ್ತಿಗಳು ಈಗ ಈ ಹೊಸ ಪದ್ಧತಿಯಿಂದ ಕಂಗಾಲಾಗಿದ್ದಾರೆ. ಟ್ರೇಗಳನ್ನು ಹಿಡಿದಿಡುವುದು, ರೇಷ್ಮೆ ಗೂಡನ್ನು ರೀಲರುಗಳಲ್ಲದವರು ಹರಾಜು ಕೂಗುವುದು ಸೇರಿದಂತೆ ಹಲವಾರು ಅವ್ಯವಸ್ಥೆಗಳಿದ್ದವು. ಈಗ ರೀಲರುಗಳ ಮತ್ತು ರೈತರ ಶ್ರಮ ಮಧ್ಯವರ್ತಿಗಳ ಪಾಲಾಗುವುದು ನಿಂತಿದೆ. ರೈತರು ಮತ್ತು ರೀಲರುಗಳು ಹೊಸ ಪದ್ಧತಿಗೆ ಹೊಂದಿಕೊಳ್ಳಲು ಕೆಲ ದಿನಗಳು ಬೇಕು. ರೀಲರುಗಳು ಮತ್ತು ರೈತರು ಅಧಿಕಾರಿಗಳಿಗೆ ಸಹಕರಿಸಿದಲ್ಲಿ ಈ ಪದ್ಧತಿಯಿಂದ ಅನುಕೂಲವಾಗುತ್ತದೆ. ಇದು ಇನ್ನೂ ಸುಧಾರಿಸಿ ರೀಲರುಗಳು ನೀಡುವ ಹಣವು ನೇರವಾಗಿ ರೈತರ ಬ್ಯಾಂಕಿನ ಅಕೌಂಟಿಗೆ ಹೋಗುವ ಹಾಗಾಗಬೇಕು’ ಎಂದು ಹೇಳಿದರು.
ರೇಷ್ಮೆ ಮಾರುಕಟ್ಟೆಯ ಜಂಟಿ ನಿರ್ದೇಶಕ ಪ್ರಭಾಕರ್, ಅಧಿಕಾರಿ ರತ್ನಯ್ಯಶೆಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೀಲರುಗಳಾದ ಅಬ್ದುಲ್ ಅಜೀಜ್, ರಾಮಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -