ಪಟ್ಟಣದ ಹೊರವಲಯದ ಇದ್ಲೂಡು ಗ್ರಾಮದಲ್ಲಿ ಒಂಭತ್ತು ವರ್ಷಗಳ ನಂತರ ಊರಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದರು. ಸೋಮವಾರದಿಂದ ಗುರುವಾರದವರೆಗೂ ನಾಲ್ಕು ದಿನಗಳ ಕಾಲ ನಡೆಯುವ ಊರ ಜಾತ್ರಗೆ ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಮಹಿಳೆಯರು ದೀಪಗಳನ್ನು ವೈವಿಧ್ಯಮಯವಾಗಿ ಅಲಂಕರಿಸಿಕೊಂಡು ತಲೆಯ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿ ವಿವಿಧ ದೇಗುಲಗಳಲ್ಲಿ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು.
ಡೋಲು, ತಮಟೆ ಹಾಗೂ ನಾದಸ್ವರ ವಾದನಗಳು ಮೆರವಣಿಗೆಯಲ್ಲಿ ಸಾಗಿದವು. ಗಂಗಮ್ಮ, ಸಪ್ಲಮ್ಮ ಮುಂತಾದ ದೇವರುಗಳನ್ನೂ ಮೆರವಣಿಗೆ ಮಾಡಲಾಯಿತು.
‘ಗ್ರಾಮಕ್ಕೆ ಒಳ್ಳೆಯದಾಗಲಿ, ಮಳೆ ಬೆಳೆ ಚೆನ್ನಾಗಿ ಆಗಲೆಂದು ಊರ ಜಾತ್ರೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಣ್ಣುಮಕ್ಕಳೆಲ್ಲಾ ತವರಿಗೆ ಬರುತ್ತಾರೆ. ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದೊಂದು ದಿನ ಒಂದೊಂದು ದೇವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಈಗ ಗ್ರಾಮವು ಪಟ್ಟಣಕ್ಕೆ ಸೇರಿಕೊಂಡಿರುವುದರಿಂದ ಊರಿಗೆ ಒಳ್ಳೆಯದಾಗಲೆಂಬ ಉದ್ದೇಶದಿಂದ ಒಂಭತ್ತು ವರ್ಷಗಳಿಂದ ನಿಲ್ಲಿಸಿದ್ದ ಊರಜಾತ್ರೆಯನ್ನು ಈ ಬಾರಿ ಮಾಡಿದೆವು’ ಎಂದು ಚನ್ನಕೇಶವಸ್ವಾಮಿ ಭಕ್ತ ಯುವಕ ಸಂಘದವರು ತಿಳಿಸಿದರು.
- Advertisement -
- Advertisement -
- Advertisement -
- Advertisement -