ಕಾನೂನಿನ ಭಯದಿಂದ ಸ್ವಚ್ಛ ಗ್ರಾಮ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆರೋಗ್ಯಕ್ಕಾಗಿ, ಗೌರವಕ್ಕಾಗಿ ಮತ್ತು ಮಾದರಿ ಬದುಕಿಗಾಗಿ ಗ್ರಾಮಸ್ಥರೆಲ್ಲಾ ಒಗ್ಗೂಡಿ ಗ್ರಾಮ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಗೇಶ್ ತಿಳಿಸಿದರು.
ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಸ್ವಸಹಾಯ ಗುಂಪುಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಹಿಳಾ ಸ್ವಸಹಾಯ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗುವುದಲ್ಲದೆ, ಹಲವಾರು ಗ್ರಾಮಾಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಅಂಟು ರೋಗಗಳು, ಸೋಂಕು ರೋಗಗಳು ಹರಡುವುದು ನಿಲ್ಲುತ್ತವೆ. ಜನರ ಆರೋಗ್ಯ ಉತ್ತಮಗೊಳ್ಳುವುದಲ್ಲದೆ ಹಣವೂ ಉಳಿತಾಯವಾಗುತ್ತದೆ. ಮಹಿಳೆಯರು ಒಂದೆಡೆ ಸೇರಿದಾಗ ಕಷ್ಟ ಸುಖಗಳನ್ನು ಹಂಚಿಕೊಂಡು ಪರಸ್ಪರರಿಗೆ ನೆರವಾಗಬಹುದು. ಆರ್ಥಿಕ ಸಂಬಂಧಿತ ಯೋಜನೆಗಳು ಮತ್ತು ಯೋಚನೆಗಳನ್ನು ಹಂತ ಹಂತವಾಗಿ ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ನಿರ್ವಹಣೆಗೆ ಅಗತ್ಯದ ದಿನಚರಿ ಕೈಪಿಡಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್, ಮುನಿವೀರಪ್ಪ, ರವಿ, ಮುನಿವೆಂಕಟಸ್ವಾಮಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.